ವಿಜಯ ಸಂಘರ್ಷ
ಭದ್ರಾವತಿ: ತಾಲ್ಲೂಕಿನ ಯರೇಹಳ್ಳಿ ಯಲ್ಲಿ ಉನ್ನತೀಕರಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 80 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಡಿ.23 ಮತ್ತು 24ರಂದು ಎರಡು ದಿನಗಳ ಕಾಲ ಶಾಲಾ ಅಮೃತ ಮಹೋತ್ಸವ ಸಂಭ್ರಮಾಚರಣೆ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಸಮಾವೇಶ ಹಮ್ನಿಕೊಂಡಿರುವುದಾಗಿ ಶಾಲೆಯ ಮುಖ್ಯೋಪಾಧ್ಯಾಯ ಕೋಗಲೂರು ತಿಪ್ಪೇಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ಸಮಾರಂಭ ಯಶಸ್ವಿಗೊಳಿಸುವ ಕಾರಣ 3 ಮುಖ್ಯ ಸಮಿತಿಗಳು ಹಾಗು 11 ಉಪ ಸಮಿತಿ ಗಳನ್ನು ರಚಿಸಲಾಗಿದೆ ಎಂದರು.
ಡಿ.23ರಂದು ಬೆಳಗ್ಗೆ 9.30ಕ್ಕೆ ಬಸಾಪುರದಿಂದ ಕೆಂಚಮ್ಮ, ಕರಿಯಮ್ಮ ದೇವಾಲಯದ ಮೂಲಕ ಕಾರ್ಯಕ್ರಮದ ಸ್ಥಳದವರೆಗೆ ಕಲಾಮೇಳದೊಂದಿಗೆ ಮೆರವಣಿಗೆ ನಡೆಯಲಿದೆ. 11.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಬಿ.ಕೆ.ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷರಾದ ವಿಠಲರಾವ್ ಕೆ, ಆನಂದಪ್ಪ, ಅಧ್ಯಕ್ಷ ರಮೇಶ್.ಬಿ, ಅಮೃತ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ್, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ವೈ.ಕೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವುದಾಗಿ ತಿಳಿಸಿದರು.
ಉದ್ಘಾಟನೆ ಸಮಾರಂಭದ ನಂತರ ಮಧ್ಯಾಹ್ನ 3ರಿಂದ 5ರವರೆಗೆ ಚಿಂತನಗೋಷ್ಠಿ, ಸಂಜೆ 5 ರಿಂದ ಸಾಂಸ್ಕೃತಿಕ ಸಂಭ್ರಮ ಸಂಜೆ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಡಿ.24ರಂದು ಬೆ.10ಕ್ಕೆ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಸಮಾವೇಶ, ಮ.2ಕ್ಕೆ ಕವಿಗೋಷ್ಠಿ, ಸ.3ರಿಂದ 4ರವರೆಗೆ ಗೀತಗಾಯನ ಕಾರ್ಯಕ್ರಮ, ಸ.4ರಿಂದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.