ವಿಜಯ ಸಂಘರ್ಷ
ಭದ್ರಾವತಿ: ಪ್ರಸ್ತುತದ ರಾಜಕಾರಣ ಬಹಳಷ್ಟು ಸ್ವಾರ್ಥದಿಂದ ಕೂಡಿದ್ದು, ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲರಂತಹ ಆದರ್ಶ ವ್ಯಕ್ತಿಗಳು ಇಂದಿನ ರಾಜಕಾರಣಕ್ಕೆ ಅಗತ್ಯ ಎಂದು ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಹೇಳಿದರು.
ಅವರು ಮಂಗಳವಾರ ನಗರದ ಲೋಕೋಪಯೋಗಿ ಇಲಾಖೆ ಸಭಾಂಗಣದಲ್ಲಿ ಜೆಎಚ್ ಪಟೇಲರ ಅಭಿಮಾನಿಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜೆ.ಎಚ್.ಪಟೇಲರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ರಾಜಕಾರಣಿಗಳು ತಮ್ಮ ನಂತರ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಕರೆತರಲು ಹವಣಿಸುತ್ತಾರೆ. ಇದರಿಂದ ಪ್ರಜಾಪ್ರಭುತ್ದದ ಆಶಯಗಳು ಜಾರಿಯಾಗದೆ, ರಾಜಾಡಳಿತದ ಆಶಯಗಳು ಜಾರಿಯಾದಂತೆ ಕಾಣುತ್ತಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಮಾತನಾಡಿ, ಧೀಮಂತ ನಾಯಕರಾಗಿದ್ದ ಜೆ.ಎಚ್.ಪಟೇಲರು ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿ ಸಭೆಯ ಗಮನಸೆಳೆದಿದ್ದರು. ಇಂದು ಹೊರರಾಜ್ಯದವರು ಉದ್ಯೋಗ ಅರಸಿ ರಾಜ್ಯಕ್ಕೆ ಆಗಮಿಸುತ್ತಿರುವುದರಿಂದ ಹಾಗು ಬ್ಯಾಂಕ್ ಗಳಲ್ಲಿ ಅನ್ಯ ರಾಜ್ಯದವರೆ ತುಂಬಿರುವುದರಿಂದ ಕನ್ನಡಿಗರಿಗೆ ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ಅನ್ಯಭಾಷಿಕರ ನಾಡಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ವೀರಶೈವ ಸಮಾಜದ ಮುಖಂಡ ಸಿದ್ದಲಿಂಗಯ್ಯ ಮಾತನಾಡಿ, ಜೆ.ಎಚ್.ಪಟೇಲರೊಂದಿಗಿನ ಒಡನಾಟವನ್ನು ಸ್ಮರಿಸಿದರು. ಕಾಗದನಗರ ಪೊಲೀಸ್ ರಾಣೆಯ ಪಿ.ಎಸ್.ಐ ಕವಿತಾ, ಶಶಿಕುಮಾರ್ ಮಾತನಾಡಿದರು. ಮುಖಂಡರಾದ ವೆಂಕಟೇಶ್, ಅನಿತಾ ಮತ್ತಿತರರಿದ್ದರು.