ಕನ್ನಡ ಭಾಷೆಗೆ ಅತ್ಯಂತ ಐತಿಹಾಸಿಕ ಮಹತ್ವ

ವಿಜಯ ಸಂಘರ್ಷ
ಶಿವಮೊಗ್ಗ: ಎಲ್ಲ ಭಾಷೆಗಳಿಗಿಂತ ಕನ್ನಡ ಭಾಷೆಗೆ ಅತ್ಯಂತ ಹೆಚ್ಚಿನ ಐತಿಹಾಸಿಕ ಮಹತ್ವ ಇದ್ದು, ಕನ್ನಡ ಭಾಷೆಯನ್ನು ಮನೆ ಮನೆ ಗಳಲ್ಲಿಯೂ ಜನರು ಹೆಚ್ಚು ಬಳಸಬೇಕು ಎಂದು ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಅಭಿಮತ ವ್ಯಕ್ತಪಡಿಸಿದರು.

ಗೋಪಾಳದ ವನಸಿರಿ ಉದ್ಯಾನವನದಲ್ಲಿ ಭಾವಗಾನ ಸಂಸ್ಥೆ ಹಾಗೂ ವನಸಿರಿ ಗೋಪಾಳ ನಿವಾಸಿಗಳ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ “ಕನ್ನಡ ರಾಜ್ಯೋತ್ಸವ” ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪಾಶ್ಚಿಮಾತ್ಯ ಭಾಷೆ ವ್ಯಾಮೋಹ ಹೊಂದಿರಬಾರದು. ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ವನಸಿರಿ ಗೋಪಾಳ ನಿವಾಸಿಗಳ ಸಂಘದ ಅಧ್ಯಕ್ಷ ಡಾ. ಶ್ರೀನಿವಾಸ ರೆಡ್ಡಿ ಮಾತನಾಡಿ, ರಾಜ್ಯೋತ್ಸವ ನಿತ್ಯೋತ್ಸವ ಆಗಬೇಕು. ಕನ್ನಡ ಭಾಷೆಯು ಅತ್ಯಂತ ಸರಳವಾದ ಭಾಷೆ. ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಗುರುತಿಸಿ ಉದ್ಯೋಗ ಅವಕಾಶ ಕಲ್ಪಿಸಬೇಕು. ಇಂತಹ ಕನ್ನಡದ ಕಾರ್ಯಕ್ರಮಗಳು ಎಲ್ಲ ಕಡೆಗಳಲ್ಲಿಯೂ ನಡೆಯಬೇಕು ಎಂದರು.

ಭದ್ರಾವತಿ ವಾಸು ಅವರ ಕನ್ನಡದ ಸೇವೆಯು ಅತ್ಯಂತ ಉತ್ತಮ ಕಾರ್ಯ. ಅನೇಕ ಕಲಾವಿದರಿಗೆ ಸಂಗೀತ ಶಿಕ್ಷಣ ನೀಡುವ ಜತೆಯಲ್ಲಿ ವೇದಿಕೆಯಲ್ಲಿ ಹಾಡಲು ಅವಕಾಶ ಕಲ್ಪಿಸುತ್ತಾರೆ. ಇದು ಹೊಸ ಕಲಾವಿದರಿಗೆ ಸ್ಫೂರ್ತಿ ಸಿಗುತ್ತದೆ ಎಂದು ಹೇಳಿದರು.

ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ವಾತಾವರಣ ಇರಬೇಕು. ಕನ್ನಡ ಭಾಷೆಯ ಸಂಭ್ರಮ ಆಚರಣೆಯನ್ನು ನವೆಂಬರ್ ಗೆ ಸೀಮಿತ ಆಗಿರದೇ ವರ್ಷಪೂರ್ತಿ ಕನ್ನಡ ಭಾಷೆಯನ್ನು ಸಂಭ್ರಮಿಸಬೇಕು. ಕನ್ನಡದ ಬಳಕೆ ಹೆಚ್ಚಾಗಬೇಕು ಎಂದು ತಿಳಿಸಿದರು.
ಭಾವಗಾನ ತಂಡದಿಂದ ಕನ್ನಡ ಗೀತೆಗಳ ಕಾರ್ಯಕ್ರಮ ನಡೆಯಿತು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮಾತನಾಡಿದರು. ಭುಜಂಗಪ್ಪ, ಶಶಿರೇಖಾ, ಭಾವಗಾನ ತಂಡದ ನಿರ್ದೇಶಕರು, ಸದಸ್ಯರು, ಗಾಯಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು