ಅಂಬೇಡ್ಕರ್ ವಿಚಾರಗಳು ಉತ್ತಮ ಮಾರ್ಗದರ್ಶನ ನೀಡುತ್ತವೆ: ಡಾ.ಅರ್ಜುನ ಗೋಳಸಂಗಿ

ವಿಜಯ ಸಂಘರ್ಷ
ಭದ್ರಾವತಿ: ದಾರಿ ತಪ್ಪಿರುವವರಿಗೆ ಹಾಗು ದಾರಿ ತಪ್ಪಿಸುತ್ತಿರುವವರಿಗೆ ಅಂಬೇಡ್ಕರ್ ವಿಚಾರಗಳು ಸರಿಯಾದ ಮಾರ್ಗದರ್ಶನ ನೀಡುತ್ತವೆ. ಅಕ್ಷರ, ಅರಿವು, ಆಚಾರಗಳನ್ನು ಪರಿಶುದ್ಧತೆ ಯಿಂದ ಸಂಪಾದಿಸಿಕೊಳ್ಳಲು ಪ್ರೇರಕರಾದವರು ಅಂಬೇಡ್ಕರ್. ಇಡೀ ಜಗತ್ತೇ ಅಚ್ಚರಿ ಪಡುವಂತಹ ಬೌದ್ಧಿಕ ಶಕ್ತಿಯನ್ನು ಅಂಬೇಡ್ಕರ್ ಅವರು ಸಂಪಾದಿಸಿದ್ದರು ಎಂದು ಸಾಹಿತಿ ಡಾ.ಅರ್ಜುನ ಗೋಳಸಂಗಿ ಅಭಿಪ್ರಾಯ ಪಟ್ಟರು.

ಕುವೆಂಪು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಬುಧವಾರದಂದು ಬಸವ ಸಭಾಭವನ ದಲ್ಲಿ ಅಂಬೇಡ್ಕರ್ 67ನೇ ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವ್ಯಕ್ತಿತ್ವ ಕುರಿತಾದ ಉಪನ್ಯಾಸ ನೀಡಿದರು.

ಸಾವಿರಾರು ಸಂಕಟಗಳು ಬಂದರೂ ಸಹ ಸಹನೆ ಮೀರದೆ, ಸಾಧನೆಯ ಹಾದಿಯಲ್ಲಿ ಸಾಗಿದರು. ಅವರು ಭಾರತೀಯ ಸಾಮಾಜಿಕ ಅಸಮಾನತೆಯ ನಡುವೆಯೂ ಬೆಳೆದ ರೀತಿ ವಿಸ್ಮಯ. ಭಾರತೀಯ ಸಾಮಾಜಿಕ ವ್ಯವಸ್ಥೆಯ ನಾಡಿಮಿಡಿತ ವನ್ನು ಅರಿತು, ಮಾನವೀಯತೆಯ ಔಷಧಿಯನ್ನು ನೀಡಿದ ಸಾಮಾಜಿಕ ವೈದ್ಯರಿವರು. ಅಂಬೇಡ್ಕರ್ ಅವರದು ಛಲದ ವ್ಯಕ್ತಿತ್ವ ಎಂದು ತಿಳಿಸಿದರು

ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ ಪ್ರೊ.ಎಸ್.ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಚರಿತ್ರೆಯೆಂದರೆ ವಿರೂಪಗೊಂಡಿರುವ ಭಾರತೀಯ ಸಾಮಾಜಿಕ ಸ್ವರೂಪವನ್ನು ಸುರೂಪ ಗೊಳಿಸುವ ಪ್ರಯತ್ನದ ಚರಿತ್ರೆ. ಅದು ಅನನ್ಯವಾದುದು. ಸಂಶೋಧಕರು, ಸಂಸ್ಕೃತಿ ಚಿಂತಕರು, ಸಮಸಮಾಜದ ಕನಸುಗಾರರು ಆದ ಅಂಬೇಡ್ಕರರ ದೃಷ್ಟಿ ಧೋರಣೆಗಳನ್ನು ಸಮಗ್ರವಾಗಿ ಅಭ್ಯಸಿಸಿದಾಗ ಅವರ ವಿದ್ವತ್, ಬರವಣಿಗೆಯ ಶಕ್ತಿ, ಚಿಂತನೆಗಳ ಒಳನೋಟಗಳು ಅಚ್ಚರಿಗೊಳಿಸುತ್ತವೆ ಎಂದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲೆಕ್ಕಪರಿಶೋಧನಾ ಇಲಾಖೆಯ ಜಂಟಿನಿರ್ದೇಶಕ ಕೆ.ಎಚ್.ಓಂಕಾರಪ್ಪ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳನ್ನು ಅರಿಯುವುದೆಂದರೆ ಮಾನವೀಯತೆ ಯನ್ನು ಅರಿತಂತೆ. ಅಂಬೇಡ್ಕರ್ ಅವರ ಜೀವನವೆಂದರೆ ಮನುಷ್ಯರಲ್ಲಿ ಪ್ರೀತಿ, ಕರುಣೆ, ಸಮಾನತೆ, ಸಂಬಂಧ ಸೌಜನ್ಯ, ಸತ್ ಚಿಂತನೆ, ಸತ್ ನುಡಿ, ಸತ್ ನಡೆಗಳನ್ನು ಬಿತ್ತಿ ಬೆಳೆಯುವಂಥದ್ದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪರೀಕ್ಷಾಂಗ ಕುಲಸಚಿವರಾದ ಡಾ. ಎಸ್.ಎಂ. ಗೋಪಿನಾಥ್ ಅವರು ನನ್ನ ಮಕ್ಕಳ ಶಾಲಾ ದಾಖಲೆಯಲ್ಲಿ ಜಾತಿಯ ಹೆಸರನ್ನೇ ಸೇರಿಸಿಲ್ಲ. ಅಂಬೇಡ್ಕರ್ ಅವರ ಆಶಯದಂತೆ ಜಾತ್ಯಾತೀತವಾಗಿ ಬಾಳಬೇಕು. ಮನುಕುಲದ ಉದ್ದಾರಕ್ಕೆ ನಮ್ಮದೇ ಆದ ಅನನ್ಯ ಸೇವೆಯನ್ನು ಮಾಡಬೇಕು. ಅಂಬೇಡ್ಕರ್ ಅವರದು ಆದರ್ಶ ಮತ್ತು ಅನುಪಮವಾದ ವ್ಯಕ್ತಿತ್ವವೆಂದರು.

ಹಣಕಾಸು ಅಧಿಕಾರಿ ಜಿ.ಬಂಗಾರಪ್ಪ, ಕಲಾನಿಕಾಯದ ಡೀನರಾದ ಪ್ರೊ.ಗುರುಲಿಂಗಯ್ಯ, ಡಾ.ಶಿವಾನಂದ ಕೆಳಗಿನಮನಿ, ಡಾ.ಅರ್ತೋಬ ನಾಯಕ, ಡಾ.ವಾಲ್ಮೀಕಿ, ಡಾ.ಚಂದ್ರಶೇಖರ್, ಪ್ರೊ.ನಾರಾಯಣ, ವಲಯ ಅರಣ್ಯಾಧಿಕಾರಿ ಆರ್.ಟಿ.ಮಂಜುನಾಥ್ ಮೊದಲಾದವರು ಭಾಗವಹಿಸಿದ್ದರು.

ಡಾ.ಪುರುಷೋತ್ತಮ ಎಸ್.ವಿ. ಪ್ರಾರ್ಥಿಸಿದರು. ಡಾ.ನವೀನ ಮಂಡಗದ್ದೆ ನಿರೂಪಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿ ನುಡಿದರು. ಡಾ.ರವಿನಾಯ್ಕ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು