ಅನೈತಿಕ ಚಟುವಟಿಕೆಗಳಿಗೆ ಯಾತ್ರಿ ನಿವಾಸ ಸ್ವರ್ಗ: ಹುಲಿಗಿ ಕೃಷ್ಣ

ವಿಜಯ ಸಂಘರ್ಷ
ಶಿಕಾರಿಪುರ: ಪಟ್ಟಣದ ಶ್ರೀ ಹುಚ್ಚುರಾಯ ಸ್ವಾಮಿ ದೇವಸ್ಥಾನ ರಾಘವೇಂದ್ರ ಮಠ ಉದ್ಯಾನವನಕ್ಕೆ ಹೊಂದಿಕೊಂಡಂತೆ ಇರುವ ಮುಜರಾಯಿ ಇಲಾಖೆಗೆ ಒಳಪಡುವ ಪ್ರವಾಸಿ ಯಾತ್ರಿ ನಿವಾಸ ಇಂದು ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ನಿರ್ಲಕ್ಷಕ್ಕೆ ಒಳಗಾಗಿ ಅನೈತಿಕ ಚಟುವಟಿಕೆ ಗಳಿಗೆ ಸ್ವರ್ಗ ತಾಣದ ನಿವಾಸವಾಗಿ ಮಾರ್ಪಟ್ಟಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಕಿಡಿಕಾರಿದರು.

ಗುರುವಾರ ಪಟ್ಟಣದ ಸುದ್ದಿ ಮನೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರ ಮುಖ್ಯಮಂತ್ರಿ ಅವಧಿಯಲ್ಲಿ ಶ್ರೀ ಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಅನುಕೂಲ ವಾಗಲೆಂದು ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ಸುಸಜ್ಜಿತ ಪ್ರವಾಸಿ ಯಾತ್ರಿ ನಿವಾಸವನ್ನು 2011 ರಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೋಟ್ಯಾಂತರ ರೂಪಾಯಿಗಳ ವೆಚ್ಚದ ಬೃಹತ್ ಯಾತ್ರಿ ನಿವಾಸ ನಿರ್ಮಿಸಿದ್ದು, ನಂತರ ಜೋಗ ಅಭಿವೃದ್ಧಿ ಪ್ರಾಧಿಕಾರದ ಸುಪರ್ದಿಯಿಂದ ಈಗ ಸರ್ಕಾರದ ಮುಜರಾಯಿ ಇಲಾಖೆಯ ಅದೀನದಲ್ಲಿದೆ.

ತಾಲೂಕು ಆಡಳಿತ ಹಾಗೂ ಜನಪ್ರತಿ ನಿಧಿಗಳ ನಿರ್ಲಕ್ಷಕ್ಕೆ ಒಳಗಾಗಿರುವ ಯಾತ್ರಿ ನಿವಾಸ ಈಗ ಕಾವಲುಗಾರ ನಿಲ್ಲದ ಭೂತ ಬಂಗಲೆ ಆಗಿದ್ದು, ಎಲ್ಲೆಂದರಲ್ಲಿ ಮದ್ಯಪಾನದ ಬಾಟಲಿ ಗಳು, ಅಡಿಕೆ ಉಗುಳು, ಬೆಲೆಬಾಳುವ ಹಾಸಿಗೆಯ ರಾಶಿಗಳು, ಬಾಗಿಲು ಗಳಿಲ್ಲದ ರೂಮುಗಳು, ಎಲ್ಲೆಂದರಲ್ಲಿ ಕಾಂಡೋಮ್ ಗಳು ಕಾಣಸಿಗುತ್ತಿದೆ. ಹಗಲು ರಾತ್ರಿ ಎನ್ನದೆ ವೇಶ್ಯಾವಾಟಿಕೆ ಸೇರಿದಂತೆ ಅನೈತಿಕ ಚಟುವಟಿಕೆಗೆ ಅನುಕೂಲ ಮಾಡಿಕೊಟ್ಟಂತಾಗಿದೆ ಎಂದು ಆರೋಪಿಸಿದರು.

ಶ್ರಾವಣ ಮಾಸ ಸೇರಿದಂತೆ ಪ್ರತಿ ಹುಣ್ಣಿಮೆಗೆ ಹಾಗೂ ಶನಿವಾರದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ಹುಚ್ಚುರಾಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸುತ್ತಾರೆ, ಮತ್ತು ದೂರದ ಹೊರ ಜಿಲ್ಲೆಗಳಿಂದ ಬರುವ ಭಕ್ತರು ಹಾಗೂ ಪ್ರವಾಸಿಗರು ಬ್ರಾಂತೇಶ ಉದ್ಯಾನ ವನಕ್ಕೂ ಸಹ ಭೇಟಿ ನೀಡುತ್ತಾರೆ. ಪ್ರವಾಸಿಗರಿಗೆ ತಂಗಲು ನಿರ್ಮಿಸಿದ್ದ ಸುಸಜ್ಜಿತ ಯಾತ್ರಿ ನಿವಾಸಕ್ಕೆ ಒಬ್ಬ ಕಾವಲುಗಾರನ್ನು ಕೂಡ ಇಲ್ಲದೇ ಇದ್ದು ಅನೈತಿಕ ಚಟುವಟಿಕೆ ಗಳನ್ನು ನಡೆಸಲು ಬರುವವರಿಗೆ ಯಾರು ಕೇಳದಂತಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಶಾಸಕ ಬಿ. ವೈ. ವಿಜಯೇಂದ್ರ, ಸಂಸದ ಬಿ. ವೈ. ರಾಘವೇಂದ್ರ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನಕ್ಕೆ, ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಾರೆ ಆದರೆ ತಮ್ಮ ಅವಧಿಯಲ್ಲಿ ನಿರ್ಮಿಸಿದ ಹತ್ತಿರದಲ್ಲಿಯೇ ಇರುವ ಯಾತ್ರಿ ನಿವಾಸಕ್ಕೆ ಮಾತ್ರ ಭೇಟಿ ಕೊಡದೆ ಪರಿಶೀಲಸದೇ ಇರುವ ಈ ಜನಪ್ರತಿನಿಧಿಗಳ ನಡೆಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಈ ಯಾತ್ರಿ ನಿವಾಸಕ್ಕೆ ಹೊಂದಿಕೊಂಡಂತೆ ಪಕ್ಕದಲ್ಲಿಯೇ ಉದ್ಯಾನವನ, ರಾಘವೇಂದ್ರ ಸ್ವಾಮಿ ದೇವಸ್ಥಾನ, ಅಯ್ಯಪ್ಪಸ್ವಾಮಿ ದೇವಸ್ಥಾನವಿದೆ. ಸುಸಂಸ್ಕೃತ ಹೆಣ್ಣು ಮಕ್ಕಳು, ನಾಗರೀಕರು ದೇವಸ್ಥಾನ ಗಳಿಗೆ ಹಾಗೂ ವಾಯು ವಿಹಾರಕ್ಕೆ ಓಡಾಡಲು ತಲೆತಗ್ಗಿಸುವಂತಾಗಿದ್ದು, ಕೋಟ್ಯಾಂತರ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಬ್ರಾಂತೇಶ ಉದ್ಯಾನ ವನದಲ್ಲೂ ಕೂಡ ನೀರಿನ ಕಾರಂಜಿ ನಿಂತು ಹೋಗಿದ್ದು ತುಕ್ಕು ಹಿಡಿಯುತ್ತಿದೆ, ಕೆರೆಯ ನೀರು ಮಲಿನವಾಗುತ್ತಿದ್ದು. ಜನಸಾಮಾನ್ಯರ ತೆರಿಗೆಯ ಹಣ ಲೂಟಿಕೋರರ ಭ್ರಷ್ಟರ ಪಾಲಾಗಿದೆ.
ಯಾತ್ರಿನಿವಾಸದ ಬಾಗಿಲುಗಳು, ಬೆಲೆಬಾಳುವ ಪೀಠೋಪಕರಣಗಳು, ವಿದ್ಯುತ್ ಸಾಮಾಗ್ರಿಗಳು ಯೂರಿನ್ ಪ್ಯಾನೆಲ್ಗಳು ಸೇರಿದಂತೆ ಹಲವು ವಸ್ತುಗಳು ಈಗಾಗಲೇ ಕಳ್ಳರ ಪಾಲಾಗಿವೆ. ಕಟ್ಟಡದಲ್ಲಿ ಉಳಿದಿರುವ ವಸ್ತುಗಳನ್ನಾದರೂ ಸಂರಕ್ಷಿಸಿ ಅನೈತಿಕ ಚಟುವಟಿಕೆಗೆ ಕ್ಷೇತ್ರದ ಶಾಸಕರು ಸಂಸದರು ಪ್ರೋತ್ಸಾಹಿಸದೆ ಪ್ರವಾಸಿಗರ ಯಾತ್ರಿ ನಿವಾಸವನ್ನು ಅಭಿವೃದ್ಧಿಪಡಿಸಲಿ ಎಂದರು.

ಸಂಸದ ಬಿ ವೈ ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರು ಕೇವಲ ಅಭಿವೃದ್ಧಿ ನೆಪದಲ್ಲಿ ಕಟ್ಟಡ ಸಂಕೀರ್ಣಗಳನ್ನು ಕಟ್ಟಿದರೆ ಸಾಲದು ಇದನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಕೂಡ ಇದೆ. ಕೂಡಲೇ ಶಾಸಕರು, ಇಲಾಖೆಯ ಅಧಿಕಾರಿಗಳು ಮತ್ತು ಸಚಿವರು ಯಾತ್ರಿ ನಿವಾಸಕ್ಕೆ ಭೇಟಿ ನೀಡಿ ಸರಿಪಡಿಸದಿದ್ದರೆ ಸಂಘಟನೆಯಿಂದ ಉಗ್ರ ಹೋರಾಟ ಮಾಡಲು ಅನಿವಾರ್ಯ ವಾಗುತ್ತದೆ ಎಂದು ಎಚ್ಚರಿಸಿ, ನಿರ್ವಹಣೆ ಮಾಡಲಾಗದಿದ್ದಲ್ಲಿ ಸಂಘ ಸಂಸ್ಥೆ ಗಳಿಗಾದರೂ ವಹಿಸಿಕೊಡಿ ಎಂದರು.

ಗೋಷ್ಟಿಯಲ್ಲಿ ತಾಲೂಕು ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಇಮ್ರಾನ್, ನಗರ ಅಧ್ಯಕ್ಷ ಮುಕ್ರಂ, ಹುಸೇನ್ ಸಾಬ್, ಶೆಟ್ಟಿಹಳ್ಳಿ ಮಹೇಶ್, ಪ್ರಕಾಶ್, ನವೀನ್, ತ್ಯಯಬ್ ಅಹಮದ್, ಉಪಸ್ಥಿತರಿದ್ದರು.

(ವರದಿ ಹುಲಿಗಿ ಕೃಷ್ಣ ಶಿಕಾರಿಪುರ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು