ವಿಜಯ ಸಂಘರ್ಷ
ಸಾಗರ (ರಿಪ್ಪನ್‌ಪೇಟೆ): ಕರ್ನಾಟಕ ಪಂಚಾಯತ್‌ರಾಜ್ ಪರಿಷತ್‌ನಿಂದ ನೀಡುವ ಡಾ.ಚಿಕ್ಕ ಕೊಮಾರಿಗೌಡ ದತ್ತಿ ಪ್ರಶಸ್ತಿಗೆ ಜಿಪಂ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ಆಯ್ಕೆಯಾಗಿದ್ದಾರೆ.
2021-22ನೇ ಸಾಲಿನ ಪ್ರಶಸ್ತಿ ಇದಾಗಿದ್ದು, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವವರಿಗೆ ನೀಡುವ ಪ್ರಶಸ್ತಿ ಇದಾಗಿದೆ.
ಕಲಗೋಡು ರತ್ನಾಕರ್ ರವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಅಡಿಯಲ್ಲಿ ಪಂಚಾಯತ್ ರಾಜ್ ಪರಿಷತ್ ನಿಂದ ಕೊಡುವ ಅತ್ಯುನ್ನತ ಪ್ರಶಸ್ತಿ ಡಾ.ಚಿಕ್ಕಕೊಮಾರಿಗೌಡ ದತ್ತಿ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯದಾದ್ಯಂತ ಒಟ್ಟು ಐವರಿಗೆ ಈ ಪ್ರಶಸ್ತಿ ವಿತರಿಸಲಾಗುತ್ತಿದೆ. ಡಿ.9ರಂದು ಬೆಂಗಳೂರಿನ ಗಾಂಧಿ ಭವನ ಆವರಣದಲ್ಲಿರುವ ಬಾಪು ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
*ಸೋಲಿಲ್ಲದ ಸರದಾರ ಕಲಗೋಡು*
ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಯಳಗಲ್ಲು ಗ್ರಾಮದ ಕಲಗೋಡು ನಿವಾಸಿಯಾದ ರತ್ನಾಕರ್ ಜೂನ್ 30 1962 ರಂದು ಜನಿಸಿದರು.
ಕಲಗೋಡ್ ರತ್ನಾಕರ್ ಪ್ರಪ್ರಥಮವಾಗಿ 1987 ರಲ್ಲಿ ಕೋಡೂರು ಮಂಡಲ ಪಂಚಾಯತ್ ಸದಸ್ಯರಾಗಿ ಗೆದ್ದು ಉಪ ಪ್ರಧಾನರಾಗಿ ಆಯ್ಕೆಯಾದರು.ಅಂದಿನಿಂದ ಪ್ರಾರಂಭವಾದ ಕಲಗೋಡು ರತ್ನಾಕರ್ ರವರ ಚೈತ್ರಯಾತ್ರೆ ಹಿಂದಿರುಗಿ ನೋಡಲೇ ಇಲ್ಲಾ.....!
1995 ರಲ್ಲಿ ಹೊಸನಗರ ತಾಪಂ ಸ್ಥಾನಕ್ಕೆ ಕೋಡೂರು ಕ್ಷೇತ್ರದಿಂದ ಸ್ಪರ್ಧಿಸಿ ಸದಸ್ಯರಾಗಿ ಆಯ್ಕೆಯಾದರು,2000 ನೇ ಸಾಲಿನಲ್ಲಿ ಶಿವಮೊಗ್ಗ ಜಿಪಂ ಗೆ ಹೊಸನಗರ ತಾಲೂಕಿನ ಕಸಬಾ ಹೋಬಳಿಯಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದರು. ಅದೇ ಅವಧಿಯಲ್ಲಿ 2000-2002 ರವರೆಗೆ ಜಿಪಂ ಉಪಾಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದರು.
ಈ ಸಂಧರ್ಭದಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬಲಿಷ್ಠ ಅಭ್ಯರ್ಥಿ ಯಾಗಿದ್ದ ಇವರು ಕ್ಷೇತ್ರದಾದ್ಯಂತ ತಮ್ಮ ಛಾಪನ್ನು ಮೂಡಿಸಿದ್ದರು ಆದರೆ ದುರದೃಷ್ಟವಶಾತ್ ಕ್ಷೇತ್ರ ಮರು ವಿಂಗಡಣೆ ಯಲ್ಲಿ ಹೊಸನಗರ ತಾಲೂಕ್ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿತ್ತು.
ನಂತರ 2005 ರಲ್ಲಿ ಮತ್ತೆ ಜಿಪಂ ಗೆ ಕಸಬಾ ಹೋಬಳಿಯಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದರು.ಈ ಅವಧಿಯಲ್ಲಿ 2008-10 ರವರೆಗೆ ಜಿಪಂ ವಿರೋಧ ಪಕ್ಷದ ನಾಯಕ ರಾಗಿ ಕಾರ್ಯನಿರ್ವಹಿಸಿದ್ದರು.ಇದೇ ಅವಧಿಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಸದಸ್ಯರಾಗಿಯು ಕಾರ್ಯ ನಿರ್ವಹಿಸಿದ್ದಾರೆ.
2010 ರಲ್ಲಿ ರಾಜಕೀಯ ಮೇಲಾಟದಲ್ಲಿ ಕಸಬಾ ಜಿಪಂ ಕ್ಷೇತ್ರದಲ್ಲಿ ಮೀಸಲಾತಿ ನಿಗದಿಯಾಗದ ಕಾರಣ ಪಕ್ಕದ ಕ್ಷೇತ್ರವಾದ ರಿಪ್ಪನ್‌ಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಪೈಪೋಟಿಯ ನಡುವೆ ಗೆಲುವು ಸಾಧಿಸಿದ್ದು ಇತಿಹಾಸ.ಇದೇ ಅವಧಿಯಲ್ಲಿ 2010 ರಿಂದ 2014 ರವರೆಗೆ ಜಿಪಂ ವಿರೋದ ಪಕ್ಷದ ನಾಯಕರಾಗಿದ್ದರು.
2014 ರ ಜುಲೈ ತಿಂಗಳಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿ ಕೇವಲ ಎರಡು ವರ್ಷಗಳಲ್ಲಿ ಜಿಲ್ಲಾದ್ಯಂತ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ತಮ್ಮದೇ ಆದ ಛಾಪನ್ನು ಮೆರೆದಿದ್ದಾರೆ.
2017 ರ ಜಿಪಂ ಚುನಾವಣೆಯಲ್ಲಿ ಮತ್ತೊಮ್ಮೆ ತಮ್ಮ ಸ್ವಕ್ಷೇತ್ರ ಕಸಬಾ ಹೋಬಳಿಯಲ್ಲಿ ಸ್ಪರ್ಧಿಸಿ ಭಾರಿ ಅಂತರದಿಂದ ಗೆದ್ದು ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರರಾಗಿದ್ದಾರೆ.
2023 ರ ಸಾಗರ ಹೊಸನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದು ಸ್ವಲ್ಪ ಪ್ರಯತ್ನ ಪಟ್ಟಿದ್ದರು ಟಿಕೆಟ್ ದೊರಕುತಿತ್ತು ಆದರೆ ಪಕ್ಷ ನಿಷ್ಠರಾದ ಕಲಗೋಡು ರತ್ನಾಕರ್ ಹೈಕಮಾಂಡ್ ನಿರ್ಧಾರಕ್ಕೆ ಬೆಂಬಲಿಸಿ ಚುನಾವಣೆಯಲ್ಲಿ ಶಕ್ತಿಮೀರಿ ಶ್ರಮಿಸಿ ತಮ್ಮ ಪಕ್ಷದ ಅಭ್ಯರ್ಥಿ ಯನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
*ಬಡ ರೋಗಿಗಳ ಪಾಲಿನ ಆಶಾಕಿರಣ*
ಹೊಸನಗರ,ತೀರ್ಥಹಳ್ಳಿ ಹಾಗೂ ಸಾಗರ ಭಾಗದ ಬಡ ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ತೆರಳಿದರೆ ಕಲಗೋಡು ರತ್ನಾಕರ್ ರವರಿಗೆ ಮೊದಲ ಕರೆ ಹೋಗಿಬಿಡುತ್ತದೆ.ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಗೆ ಹಾಜರಾಗುವ ಕಲಗೋಡು ರತ್ನಾಕರ್ ರೋಗಿಗೆ ಚಿಕಿತ್ಸೆ ಕೊಡಿಸಿ ಅವರು ಗುಣಮುಖರಾಗುವವರೆಗೂ ಮಾಡುವ ಫಾಲೋಅಪ್ ತುಂಬಾ ವಿಶೇಷ ವಾದುದು,ಯಾವುದೇ ಪಕ್ಷವಾಗಿರಲಿ , ಧರ್ಮವಾಗಿರಲಿ ,ಜಾತಿಯಾಗಿರಲಿ ಆರೋಗ್ಯ ಸಮಸ್ಯೆಯೆಂದರೆ ಅಲ್ಲಿಗೆ ಬಂದು ನಿಲ್ಲುವ ಕಲಗೋಡು ರತ್ನಾಕರ್ ಎಷ್ಟೋ ಬಡ ಜನರ ಪಾಲಿನ ದೇವರಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ.
ಒಟ್ಟಾರೆಯಾಗಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಾಯಕ ಕಲಗೋಡು ರತ್ನಾಕರ್ ರವರಿಗೆ ಡಾ.ಚಿಕ್ಕಕೊಮಾರಿ ಗೌಡ ದತ್ತಿ ಪ್ರಶಸ್ತಿ ದೊರಕಿರುವುದು ಸಂತಸದ ವಿಷಯವಾಗಿದೆ.
ಸೋಲಿಲ್ಲದ ಸರದಾರನಿಗೆ ಅಭಿನಂದನೆ
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವವರಿಗೆ ನೀಡುವ ಪ್ರಶಸ್ತಿ ಡಾ ಚಿಕ್ಕಕೊಮಾರಿ ಗೌಡ ಪ್ರಶಸ್ತಿಗೆ ಆಯ್ಕೆಯಾಗಿರುವ ಕಲಗೋಡು ರತ್ನಾಕರ್ ರವರಿಗೆ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ , ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ,ಆರ್ ಎಂ ಮಂಜುನಾಥ್ ಗೌಡ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ,ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ ಸೇರಿದಂತೆ ಅನೇಕ ಮುಖಂಡರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.