ವಿಜಯ ಸಂಘರ್ಷ
ಸಾಗರ (ಆನಂದಪುರ): ಮಕ್ಕಳಲ್ಲಿ ವ್ಯವಹಾರ ಕೌಶಲ್ಯವನ್ನು ವೃದ್ಧಿಸುವುದರ ಜೊತೆ ಜೊತೆಗೆ ಗಣಿತದ ಮೂಲ ಕಲ್ಪನೆಗಳನ್ನು ಮೂಡಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆಯು ಶಾಲೆ ಗಳಲ್ಲಿ ಮಕ್ಕಳ ಸಂತೆಯನ್ನು ನಡೆಸುವಂತೆ ಯೋಜನೆ ರೂಪಿಸಿ ಆದೇಶವನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಆನಂದಪುರದ ಬಿ.ಹೆಚ್. ರಸ್ತೆಯ ಬದಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ಸಂತೆಯನ್ನು ಸಂಯೋಜಿಸಲಾಗಿತ್ತು.
ಮಧ್ಯಾಹ್ನದ ಸಮಯದಲ್ಲಿ ಏರ್ಪಡಿಸಿದ್ದ ಸಂತೆಯಲ್ಲಿ ಪುಟಾಣಿ ಮಕ್ಕಳು ತಾವು ತಂದಿದ್ದ ವಸ್ತುಗಳನ್ನು ಅತ್ಯಂತ ಉತ್ಸಾಹ ದಿಂದ ಮಾರಾಟ ಮಾಡುವಲ್ಲಿ ನಿರತರಾಗಿದ್ದು ಕಂಡು ಬಂದಿತು. ಪೋಷಕರು, ಸಾರ್ವಜನಿಕರು ಮಕ್ಕಳ ಸಂತೆಗೆ ಆಗಮಿಸಿ ವಸ್ತುಗಳನ್ನು ಖರೀದಿಸಿ ಮಕ್ಕಳನ್ನು ಹುರಿದುಂಬಿಸಿದರು.
62 ಸಂಖ್ಯೆಯ ಮಕ್ಕಳಿಗೆ ಜ್ಞಾನಾರ್ಜನೆ ಯನ್ನು ನೀಡುತ್ತಿರುವ ಈ ಶಾಲೆಯಲ್ಲಿ ಎಲ್ಲಾ ಮಕ್ಕಳು ವಿವಿಧ ವಸ್ತುಗಳನ್ನು ತಂದು ಮಾರಾಟ ಮಾಡುವಲ್ಲಿ ಖುಷಿಪಟ್ಟರು. ತರಕಾರಿ, ಹಣ್ಣುಗಳು, ಹೂವು, ಲೇಖನ ಸಾಮಗ್ರಿಗಳು, ದಿನಸಿ ವಸ್ತು, ಸ್ವಚ್ಛ ಹಾಗೂ ಪರಿಶುದ್ಧ ತಿಂಡಿ-ತಿನಿಸುಗಳು, ಆಟಿಕೆ ವಸ್ತುಗಳು ಸೇರಿದಂತೆ ಹಲವು ಬಗೆಯ ವಸ್ತುಗಳನ್ನು ತಂದು ಅವುಗಳ ಪ್ರಚಾರ ಮಾಡುತ್ತಾ ಬಿರುಸಿನ ವ್ಯಾಪಾರದ ಅನುಭವ ಪಡೆದರು. ಪ್ರತಿ ಮಗುವು 300 ರಿಂದ 550 ರುಪಾಯಿಗಳಿಗೂ ಅಧಿಕ ವ್ಯವಹಾರ ನಡೆಸಿ ಖುಷಿಪಟ್ಟರು. 2 ಗಂಟೆಗಳ ಅಲ್ಪಾವಧಿಯಲ್ಲಿ ನಡೆದ ಸಂತೆಯಲ್ಲಿ 5 ಸಾವಿರ ರು ಗಳಿಗೂ ಅಧಿಕ ವ್ಯವಹಾರ ವನ್ನು ಮಕ್ಕಳು ನಡೆಸಿದರು. ಹಳೆಯ ವಿದ್ಯಾರ್ಥಿಯೊಬ್ಬರು ಸಂತೆಗೆ ಅನುವಾಗುವಂತೆ ಉಚಿತವಾಗಿ ಶಾಮಿಯಾನದ ವ್ಯವಸ್ಥೆ ಕಲ್ಪಿಸಿದ್ದು ಅನೇಕ ಪೋಷಕರು ಈ ಚಟುವಟಿಕೆಗೆ ಪೂರಕಾಗಿ ಸಹಕರಿಸಿದ್ದು ಕಂಡುಬoದಿತು.
ಎಸ್.ಡಿ.ಎo ಸಿ ಅಧ್ಯಕ್ಷ ಪ್ರಭಾಕರ್, ಸಿ.ಆರ್.ಪಿ., ಮುಖ್ಯಶಿಕ್ಷಕರು, ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದು ಮಕ್ಕಳ ಸಂತೆಯನ್ನು ಯಶಸ್ವಿ ಗೊಳಿಸಿದರು.ಇಂತಹ ಚಟುವಟಿಕೆ ಗಳು ಮಕ್ಕಳಲ್ಲಿ ಉತ್ಸಾಹ, ಮಾತುಗಾರಿಕೆ, ವ್ಯವಹಾರ ಜ್ಞಾನ , ವಿಷಯಗಳ ಪರಿಜ್ಞಾನ ಎಲ್ಲವನ್ನೂ ವೃದ್ಧಿಸುತ್ತದೆ. ಪಠ್ಯದೊಂದಿಗೆ ಇಂಥಹ ಪಠ್ಯೇತರ ಚಟುವಟಿಕೆಗಳಾಧಾರಿತ ಕಾರ್ಯಕ್ರಮಗಳು ಕಲಿಕೆಯಲ್ಲಿ ಪ್ರಗತಿ ತರುವುದು ನಿಶ್ಚಿತ. ಮಕ್ಕಳ ಸಂತೆಗೆ ಪೋಷಕರ ಸ್ಪಂದನೆ ಉತ್ತಮವಾಗಿತ್ತು.
(ಲೋಕಪ್ಪ, ಡಿ.ಮುಖ್ಯ ಶಿಕ್ಷಕರು)
(ವರದಿ ಎಸ್.ಡಿ.ಚಂದ್ರಶೇಖರ್ ಆನಂದಪುರ)