ವಿಜಯ ಸಂಘರ್ಷ
ಭದ್ರಾವತಿ: ರಾಜ್ಯದಲ್ಲಿ ಇತರೆ ಭಾಷಿಗರು ತಮ್ಮ ವ್ಯಾಪಾರ ವಹಿವಾಟು ಪ್ರದೇಶಗಳಲ್ಲಿ ಕನ್ನಡ ನಾಮಫಲಕ ಹಾಕದೆ ತಾತ್ಸರ ತೋರಿದ್ದು ಆದರ ವಿರುದ್ದ ಸಮರ ಸಾರಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರು ಹಾಗೂ ಕಾರ್ಯಕರ್ತರ ಬಂಧನ ಖಂಡನೀಯ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಕಪ್ಪು ಪಟ್ಟಿ ಧರಿಸಿ ಮಾತನಾಡಿದ ಕರವೇ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಹೊಸವರ್ಷವನ್ನು ಕರಾಳ ದಿನವನ್ನಾಗಿ ಆಚರಣೆ ಮಾಡುತ್ತಿದ್ದೇವೆ ಎಂದರು.
ಉದ್ದಿಮೆದಾರರಿಗೆ ಪರವಾನಿಗೆ ನೀಡುವಾಗ ಕಡ್ಡಾಯವಾಗಿ ಶೇ:60 ಕನ್ನಡದಲ್ಲಿ ನಾಮಫಲಕವನ್ನು ಅಳವಡಿಸಬೇಕು ತಪ್ಪಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ರಾಜ್ಯ ಸರ್ಕಾರ ಕನ್ನಡ ಪರ ಕಾರ್ಯಕರ್ತರನ್ನು ಬೆಂಬಲಿಸುವುದನ್ನು ಬಿಟ್ಟು ವಿನಃ ಕಾರಣ ಬಂಧಿಸಿರುವುದು ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹಾಗೂ ಕಾರ್ಯಕರ್ತರನ್ನು ಬಿಡುಗಡೆ ಗೊಳಿಸಬೇಕು.ಆರಂಭಿಕ ಹಂತದಲ್ಲಿ ಕೇವಲ ಪ್ರತಿಭಟನೆಯ ಮೂಲಕ ಅಗ್ರಹಿಸಲಾಗಿದೆ.
ಬಿಡುಗಡೆ ಮಾಡದಿದ್ದಲ್ಲಿ ಪ್ರತಿಭಟನೆ ಉಗ್ರ ಸ್ವರೂಪದಲ್ಲಿ ಹಮ್ಮಿಕೊಳ್ಳ ಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಕ್ಷಣಾ ವೇದಿಕೆಯ ಮಹಿಳಾ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಎಲ್.ಮಹೇಶ್ವರಿ, ನಾಗರತ್ನ ಎನ್, ಸುಶ್ಮಿತ ಎಚ್.ಡಿ. ಸೇರಿದಂತೆ ಅನೇಕರು ಭಾಗವಹಿಸಿ, ಉಪತಹಸೀಲ್ದಾರ್ ರಾಧಾಕೃಷ್ಣಭಟ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.