ವಿಜಯ ಸಂಘರ್ಷ
ಶಿಕಾರಿಪುರ: ಜಿಲ್ಲೆಯ ಬಿಸಿ ಊಟ ನೌಕರರ ಸಂಘ ಹಾಗೂ ಅಂಗನವಾಡಿ ನೌಕರರ ಸಂಘಟನೆಗಳಿಂದ ಶಿಕಾರಿಪುರ ಪಟ್ಟಣದ ನರಸಪ್ಪ ಸ್ಮಾರಕ ಬಯಲು ರಂಗ ಮಂದಿರದಲ್ಲಿ ಸಿಐಟಿಯು ಜಾಥಾ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಬಿಸಿ ಊಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಹನುಮಮ್ಮ ಮಾತನಾಡಿ,ರಾಜ್ಯದಲ್ಲಿ ಅಂಗನವಾಡಿ ನೌಕರರು ಹಾಗೂ ಬಿಸಿಊಟ ತಯಾರಿಸುವ ನೌಕರರಿಗೆ ಸೇವಾ ಭದ್ರತೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಾಗಿ ಸಂಸದ ಬಿ.ವೈ. ರಾಘವೇಂದ್ರರವರ ಕಚೇರಿಯ ಮುಂದೆ ಶಿವಮೊಗ್ಗದಲ್ಲಿ ಜ: 23, 24,25 ರಂದು ಮೂರು ದಿನಗಳ ಕಾಲ ಅಹೋರಾತ್ರಿ ಪ್ರತಿಭಟನೆ ಧರಣಿ ನಡೆಸಲಾಗುವುದು ಎಂದರು.
ಹಿಂದೆ ಕೇಂದ್ರ ಸರ್ಕಾರ ಅಂಗನವಾಡಿ ನೌಕರರಿಗೆ 15000 ಬಿಸಿ ಊಟ ನೌಕರರಿಗೆ 6000 ವೇತನ ನೀಡುವ ಭರವಸೆ ನೀಡಿತ್ತು. ಆದರೆ ಇದುವರೆಗೂ ನಮಗೆ ಗೌರವದ ವೇತನ ನಿಗದಿಪಡಿಸಿಲ್ಲ. ಕಾರ್ಮಿಕ ಕಾನೂನುಗಳನ್ನು ಕಾರ್ಮಿಕ ಸಂಹಿತೆಗಳನ್ನಾಗಿ ರೂಪಿಸುವ ಕ್ರಮ ಹಿಂಪಡೆಯಬೇಕು, ಬಿಸಿ ಊಟ ಕಾರ್ಮಿಕರಿಗೆ ಪರಿಹಾರ ನೀಡದೆ ನಿವೃತ್ತಿ ಮಾಡಬಾರದು, ಈಗಾಗಲೇ ನಿವೃತ್ತಿ ಹೊಂದಿದವರಿಗೆ ಹಿಡಿ ಗಂಟು ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಜ್ಯದ ಎಲ್ಲಾ ಸಂಸದರ ಕಚೇರಿಗಳ ಮುಂದೆ ನಮ್ಮೆಲ್ಲಾ ನೌಕರರು ಧರಣಿ ನಡೆಸಲಿದ್ದಾರೆ ಎಂದರು.
ಅಂಗನವಾಡಿ ನೌಕರರ ಜಿಲ್ಲಾ ಅಧ್ಯಕ್ಷೆ ಶೈಲಜಾ ರವರು ಮಾತನಾಡಿ ಎನ್ಇಪಿ ನಿಲ್ಲಿಸಿ ಅಂಗನವಾಡಿ ಕೇಂದ್ರ ಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ನಡೆಸುವ ಕೇಂದ್ರ ವಾಗಬೇಕು, ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರಿಗೆ ಗ್ರಾಚುಟಿ ಬಿಡುಗಡೆ ಮಾಡವುದು, ಇತರೆ ಇಲಾಖೆಯ ಸರ್ಕಾರದ ಕೆಲಸಗಳಿಗೆ ಅಂಗನವಾಡಿ ನೌಕರರ ಬಳಕೆ ನಿಲ್ಲಿಸುವ ಬಗ್ಗೆ ಸೇರಿದಂತೆ ಹಲವು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎಲ್ಲಾ ನೌಕರರು ಭಾಗವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಜಯಮ್ಮ, ಸೂರ್ಯ ಕಲಾ, ಮೀನಮ್ಮ, ಮಂಜುಳ, ನಿರ್ಮಲ, ರೂಪ ಸೇರಿದಂತೆ ಹಲವರಿದ್ದರು.