ವಿಜಯ ಸಂಘರ್ಷ
ಭದ್ರಾವತಿ: ಕ್ರೈಸ್ತರ ಹಿತರಕ್ಷಣೆ ಉದ್ದೇಶದಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸುವುದಾಗಿ ಕ್ರೈಸ್ತ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಯೇಸುದಾಸ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹಿಂದಿನ ಚುನಾವಣೆಯಲ್ಲಿ ಲೋಕಸಭಾ ಅಭ್ಯರ್ಥಿ ಬಿ.ವೈ ರಾಘವೇಂದ್ರರವರನ್ನು ಬೆಂಬಲಿಸ ಲಾಗಿತ್ತು. ಬದಲಾದ ರಾಜಕೀಯ ಪರಿಸ್ಥಿತಿ ಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರನ್ನು ಬೆಂಬಲಿಸುವುದಾಗಿ ತಿಳಿಸಿದರು.
ಕ್ರೈಸ್ತ ಸಂಘಟಕರಿಗೆ ಕಿರುಕುಳ ಹೆಚ್ಚುತ್ತಿದೆ. ಆದ್ದರಿಂದ ಕ್ರೈಸ್ತರಿಗೆ ರಕ್ಷಣೆ ಮುಖ್ಯ. ಕ್ರೈಸ್ತರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರಾಜಕೀಯ ಸ್ಥಾನಮಾನದಲ್ಲೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಮ್ಮ ರಕ್ಷಣೆಗಾಗಿ ಕಾಂಗ್ರೆಸ್ ನಮ್ಮ ಆದ್ಯತೆ ಎಂದರು.
ತೆಲುಗು ಕ್ರಿಶ್ಚಿಯನ್ ವೇಲ್ಫರ್ ಅಸೋಸಿಯೇಷನ್ ಅಧ್ಯಕ್ಷ ಜೆ.ಬಾಸ್ಕರ್ ಬಾಬು ಮಾತನಾಡಿ, ಭದ್ರಾವತಿ ತಾಲೂಕಿನಲ್ಲಿ ಸುಮಾರು 25 ಸಾವಿರ ಕ್ರೈಸ್ತ ಮತದಾರರಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು ಜಾತ್ಯಾತೀತ ನಾಯಕರಾಗಿದ್ದರು. ಅವರು ಎಲ್ಲಾ ಜಾತಿ, ಧರ್ಮದ ಪರವಾಗಿ ಶ್ರಮಿಸಿದ್ದರು. ಈ ಹಿನ್ನಲೆಯಲ್ಲಿ ಅವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಬೆಂಬಲಿಸಲಾಗುತ್ತಿದೆ. ಅಲ್ಲದೆ ಕ್ಷೇತ್ರದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅವರು ಕ್ರೈಸ್ತರ ಪರವಾಗಿದ್ದಾರೆ. ಈ ಎಲ್ಲಾ ಕಾರಣಗಳಿಂದ ಈ ಬಾರಿ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಬೆಂಬಲಿಸಲಾಗುತ್ತಿದೆ ಎಂದರು.
ಗೋಷ್ಟಿಯಲ್ಲಿ ಫಾಸ್ಟರ್ ಗಳಾದ ಜಾನ್ಸನ್, ಉಮೇಶ್, ಜಯರಾಂ, ಪ್ರಭಾಕರ್, ಅಂತೋಣಿ ಪ್ರಕಾಶ್, ಅಬಕೂಕ್, ಮುಖಂಡರಾದ ಗ್ಯಾಬ್ರಿಯಲ್, ರಾಜು, ಅಂತೋಣಿ, ಎಂ.ಸಾಮ್ಯುಯೆಲ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಹಲವರಿದ್ದರು.