ಕುವೆಂಪು ವಿವಿ: ಪ್ರೊ.‌ಬಿ.‌ಕೃಷ್ಣಪ್ಪ ಹೋರಾಟದ ಕುರಿತ ವಿಚಾರ ಸಂಕಿರಣ

ವಿಜಯ ಸಂಘರ್ಷ
ಭದ್ರಾವತಿ: ದಲಿತರ ವಿರುದ್ಧ ಕ್ರೌರ್ಯಗಳು ನಡೆಯದಂತೆ ನೋಡಿಕೊಳ್ಳುವುದರ ಜೊತೆಗೆ ಎಲ್ಲರನ್ನೂ ವಿಚಾರವಂತರಾಗುವಂತೆ ಮಾಡುವಂತಾಗಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.‌ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಪ್ರೊ.‌ಬಿ.‌ ಕೃಷ್ಣಪ್ಪ‌ ಅಧ್ಯಯನ ಕೇಂದ್ರ ಮತ್ತು ಕನ್ನಡ ಭಾರತಿಯ ಸಹಯೋಗದಲ್ಲಿ ಪ್ರೊ.‌ಎಸ್. ಪಿ.‌ ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ಪ್ರೊ.‌ಬಿ.‌ಕೃಷ್ಣಪ್ಪ ಅವರ ಹೋರಾಟದ 50ನೇ ವರ್ಷಾಚರಣೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಯುವಕರಲ್ಲಿ ಆರೋಗ್ಯವಂತ ವಿಚಾರಗಳನ್ನು ತುಂಬುವ ಮತ್ತು ಅರಿವು ಮೂಡಿಸುವುದು‌ ಅತ್ಯಗತ್ಯ. ಪ್ರೊ.ಬಿ.ಕೃಷ್ಣಪ್ಪ, ಯು.ಆರ್. ಅನಂತಮೂರ್ತಿ, ಲಂಕೇಶ್ ರಂತಹ ಸಾಂಸ್ಕೃತಿಕ ನಾಯಕರ ವಿಚಾರಧಾರೆಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಚರ್ಚೆಗೊಳ ಗಾಗಬೇಕು ಮತ್ತು ಯುವ ಮನಸ್ಸುಗಳಲ್ಲಿ‌ ಸಾಮಾಜಿಕ ಒಳಗೊಳ್ಳುವಿಕೆಯ ವಿಚಾರಗಳು ಬೇರೂರಬೇಕು ಎಂದರು.

ಕಾರ್ಯಕ್ರಮ‌ ಉದ್ಘಾಟಿಸಿ ಮಾತನಾಡಿದ ಇಂದಿರಾ ಕೃಷ್ಣಪ್ಪ, ಜಾತಿ, ಅಸ್ಪೃಶ್ಯತೆ, ಅಸಮಾನತೆ, ಲಿಂಗ ತಾರತಮ್ಯ, ಮೂಢನಂಬಿಕೆ, ಕಂದಾಚಾರ ಮತ್ತಿತರ ಕೊಳಕುಗಳನ್ನು ನಿವಾರಿಸಿ ಸಮ ಸಮಾಜ ನಿರ್ಮಾಣ ಮಾಡಲು ಹೋರಾಟದಿಂದ ಮಾತ್ರ ಸಾಧ್ಯ ಎಂದು ಅರಿತು ದಲಿತ ಸಂಘರ್ಷ ಸಮಿತಿಯನ್ನು ಹುಟ್ಟು ಹಾಕಿದವರು ಪ್ರೊ.‌ಬಿ.ಕೃಷ್ಣಪ್ಪ ಎಂದರು.

ಪ್ರೊ.ಬಿ.ಕೃಷ್ಣಪ್ಪ ಶೋಷಿತರಲ್ಲಿ ಬಿಡುಗಡೆಯ ಭಾವನೆಯನ್ನು ಜಾಗೃತಗೊಳಿಸಿದರು. ಬುದ್ಧ, ಬಸವ, ಅಂಬೇಡ್ಕರ್, ಕಾರ್ಲ್ ಮಾರ್ಕ್ಸ್ ರ ಚಿಂತನೆಗಳನ್ನು ಅಂತರ್ಗತಗೊಳಿಸಿಕೊಂಡು ಸಮಸ್ತ ಶೋಷಿತರ ಬದುಕಿನ ಉನ್ನತಿಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಅಪರೂಪದ ವ್ಯಕ್ತಿ. ಜಾತಿಧರ್ಮ ಜಾತಿಯ ಮೀರಿನಿಂತ ಮಹಾನ್ ಚೇತನ ಎಂದು ಬಣ್ಣಿಸಿದರು. 

ಪ್ರೊ. ಕೃಷ್ಣಪ್ಪ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.‌ ದೇವಿದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಎ.‌ ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ.‌ಎಸ್‌. ಎಂ. ಗೋಪಿನಾಥ್, ಹಣಕಾಸು ಅಧಿಕಾರಿ ಜಿ.‌ಬಂಗಾರಪ್ಪ, ದಸಂಸಂ ರಾಜ್ಯ ಸಂಚಾಲಕ ಗುರುಮೂರ್ತಿ, ಡಾ.‌ ಡೋಮಿನಿಕ್, ಪ್ರೊ.‌ಪ್ರಶಾಂತ್ ನಾಯಕ್, ಪ್ರೊ.‌ಎಸ್. ಚಂದ್ರಶೇಖರ್, ಪ್ರೊ.‌ಬಿ.‌ಎಂ. ಪುಟ್ಟಯ್ಯ, ಪ್ರೊ.‌ಗುರುಲಿಂಗಯ್ಯ, ಡಾ.‌ನೆಲ್ಲಿಕಟ್ಟೆ ಸಿದ್ದೇಶ್ ಮತ್ತಿರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು