ವಿಜಯ ಸಂಘರ್ಷ
ಶಿವಮೊಗ್ಗ: ಮೇ 2ರಂದು ಕಾಂಗ್ರೆಸ್ ರಾಷ್ಟ್ರ ನಾಯಕ ರಾಹುಲ್‍ಗಾಂಧಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಗೀತಾ ಶಿವರಾಜ್‍ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.
ಅವರು ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಇಡೀ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಹಿಂದೆಂದೂ ಕಾಣದ ರೀತಿಯಲ್ಲಿ ಜನ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿ ದ್ದಾರೆ. ನಗರದಲ್ಲಿ ಕೂಡ ಒಳ್ಳೆಯ ವಾತಾವರಣ ಕಂಡು ಬಂದಿದ್ದು, ಜನರ ಉಪಚಾರಕ್ಕೆ ನಾನು ತುಂಬ ಋಣಿ ಯಾಗಿದ್ದೇನೆ. ಈ ರೀತಿಯ ಬದಲಾವಣೆ ಯನ್ನು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಎಲ್ಲಾ ವರ್ಗದ ಜನ ಅಭಿನಂದಿಸುತ್ತಿದ್ದಾರೆ. ಮತ ಕೇಳಲು ಮನೆಗೆ ಹೋದರಿಗೆ ಮನೆ ಒಳಗೆ ಕರೆದು ಚಹಾ, ನೀರು, ನೀಡುತ್ತಿದ್ದಾರೆ. ಇವರ ಪ್ರೀತಿಗೆ ಹೃದಯ ತುಂಬಿ ಬರುತ್ತಿದೆ ಎಂದರು.
ಈಗಾಗಲೇ ಗ್ಯಾರಂಟಿ ಕಾರ್ಡ್‍ಗಳ ವಿತರಣೆ ಕಾರ್ಯ ಮುಗಿದಿದೆ. 3ನೇ ಹಂತದ ಪ್ರಚಾರಕ್ಕೆ ಕಾಲಿಟ್ಟಿದ್ದೇವೆ. ಬಿಜೆಪಿ ಪ್ರಚಾರಕ್ಕೆ ಹೋಲಿಸಿದರೆ ನಮ್ಮ ಪ್ರಚಾರವೇ ಜಾಸ್ತಿ ಇದೆ. ಮೇ 2 ರಂದು ಮಧ್ಯಾಹ್ನ 12 ರಿಂದ 1.30ರವರೆಗೆ ರಾಹುಲ್ ಗಾಂಧಿಯವರು ಸಮಯ ನೀಡಿದ್ದಾರೆ. ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಆಗಮಿಸಲಿದ್ದಾರೆ ಎಂದರು.
ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿಕಾರಿಪುರ ಮತ್ತು ಶಿವಮೊಗ್ಗ ನಗರ ನಾಲ್ಕು ತಾಲ್ಲೂಕುಗಳ ಮತದಾರರು ಆಗಮಿಸಲಿದ್ದಾರೆ. ಅಲ್ಲದೆ ಫಿಲಂ ಛೇಂಬರ್ ನವರು ಕೂಡ ಇದೇ ಮೊದಲ ಬಾರಿಗೆ ಗೀತಾಶಿವರಾಜ್‍ಕುಮಾರ್ ರವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಘಟಾನುಘಟಿ ನಾಯಕ ನಟರು, ನಟಿಯರು ಮತ್ತು ಚಿತ್ರತಂಡದ ಪ್ರಮುಖರು ಕ್ಷೇತ್ರದ ಎಲ್ಲಾ ತಾಲ್ಲೂಕುಗಳಲ್ಲಿ ಪತ್ರಿಕಾಗೋಷ್ಠಿ ಮತ್ತು ರೋಡ್‍ಶೋ ಮೂಲಕ ಗೀತಕ್ಕನ ಪರ ವ್ಯಾಪಕ ಪ್ರಚಾರ ಮಾಡಲಿದ್ದಾರೆ. ನಾವು ಅವರಿಗೆ ಒತ್ತಾಯಿಸಿಲ್ಲ. ಅವರೇ ಸ್ವಯಂ ಪ್ರೇರಿತರಾಗಿ ಬರುತ್ತಿದ್ದು, ಇನ್ನೂ ಅನೇಕ ಚಿತ್ರರಂಗದ ಪ್ರಮುಖರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ನಟ ದುನಿಯಾ ವಿಜಿ, ಡಾಲಿ ಧಜಂಜಯ್, ಸತ್ಯ, ಚಿಕ್ಕಣ್ಣ, ವಿಜಯರಾಘವೇಂದ್ರ, ನೆನಪಿರಲಿ ಪ್ರೇಮ್, ನಿಸ್ವಿಕಾನಾಯ್ಡು, ಚಂದನಶೆಟ್ಟಿ, ಅನುಶ್ರೀ, ಅಕುಲ್‍ಬಾಲಾಜಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು.
ಅತ್ಯಂತ ದೊಡ್ಡ ಅಂತರದಲ್ಲಿ ಗೀತಾಶಿವರಾಜ್ ಕುಮಾರ್ ಗೆಲ್ಲುತ್ತಾರೆ. ಮೋದಿ ಸರ್ಕಾರದ ಅಭಿವೃದ್ಧಿಯನ್ನು ಮತ್ತು ಸುಳ್ಳನ್ನು 10 ವರ್ಷದಲ್ಲಿ ಜನ ನೋಡಿದ್ದಾರೆ. ಅಣ್ಣಾಮಲೈ ವಿಳಾಸ ಇಲ್ಲದ ವ್ಯಕ್ತಿ, ತಮಿಳುನಾಡಿಗೆ ಯಾಕೆ ಹೋದರು. ಅವರ ಪ್ರಚಾರ ಯಾವುದೇ ಪರಿಣಾಮ ಬೀರಲ್ಲ ಎಂದರು.
ಸುದ್ಧಿಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಪಕ್ಷದ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಜೀವ ವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ.ಮಂಜುನಾಥ್, ಪ್ರಮುಖರಾದ ಸುವರ್ಣ ನಾಗರಾಜ್, ಚಿನ್ನಪ್ಪ, ಶಮಂತ್, ಜಿತೇಂದ್ರ ಸೇರಿದಂತೆ ಹಲವರಿದ್ದರು.