ವಿಜಯ ಸಂಘರ್ಷ
ಸಾಗರ: ಆನಂದಪುರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ. ಬಿಸಿಲ ಬೇಗೆಯಿಂದ ಬಳಲಿ, ಬೆಳೆ ಕಾಪಾಡಿಕೊಳ್ಳಲು ಹಾತೊರೆಯುತ್ತಿದ್ದ ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದರು. ಸಿಡಿಲಬ್ಬರದ ಮಳೆ ಯಿಂದಾಗಿ ಈಗ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಬೈರಾಪುರ ಗ್ರಾಮದ ನಿತ್ಯಾನಂದ ಅವರ ಬಾಳೆತೋಟ ಭಾರಿ ಮಳೆ ಗಾಳಿಯಿಂದಾಗಿ ನೆಲಕಚ್ಚಿದ್ದು, ಅಂದಾಜು 4 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕಣ್ಣೂರು ಗ್ರಾಮದ ಭರ್ಮಪ್ಪ ಅವರ ಅಡಿಕೆ ತೋಟದ ಮೇಲೆ ಮರ ಬಿದ್ದು, ಬಹಳಷ್ಟು ಅಡಿಕೆ ಮರಗಳು ಮುರಿದು ಬಿದ್ದು ಸಾಕಷ್ಟು ಹಾನಿಯಾಗಿದೆ.
ಕಣ್ಣೂರಿನ ಧರ್ಮಪ್ಪ ಹಾಗೂ ಗೋಪಾಲ ಅವರ ಬಾಳೆತೋಟಕ್ಕೆ ಹಾನಿಯಾಗಿದೆ. ಬೈರಾಪುರ ಗ್ರಾಮದ ಚಂದ್ರಪ್ಪ, ವಿಠಲ ಅವರ ಬಾಳೆ ಹಾಗೂ ಅಡಿಕೆ ತೋಟಕ್ಕೂ ಹಾನಿಯಾಗಿದೆ. ಬರದ ಸಮಯದಲ್ಲಿ ಬರೆ ಎಳೆದಂತಾಗಿದೆ. ಕಣ್ಣೂರಿನ ಮಂಜಮ್ಮ ಒಂದು ಎಕರೆಯಲ್ಲಿ ಬೆಳೆದ ಜೋಳ ಸಂಪೂರ್ಣ ನೆಲಕಚ್ಚಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಮಳೆಯ ಅಬ್ಬರದಿಂದ ಹೊಸಕೊಪ್ಪ ಗ್ರಾಮದ ಯಶೋಧಮ್ಮ ಅವರ ಮನೆ ಮೇಲೆ ಮರ ಬಿದ್ದು, ಸಾಕಷ್ಟು ಹಾನಿಯಾಗಿದೆ. ಮನೆಯವರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ. ಇದಲ್ಲದೆ ಕಣ್ಣೂರು ಗ್ರಾಮದ ಪಾರ್ವತಮ್ಮ ಅವರ ಮನೆಯ ಗೋಡೆ ಕುಸಿದಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಸಕ ಗೋಪಾಲಕೃಷ್ಣ ಬೇಳೂರು, ಭೈರಾಪುರ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಕರಿಬಸಪ್ಪ ಅವರ ಅಡಿಕೆ, ಬಾಳೆತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.