ಸಮಸ್ಯೆ ಬಗೆಹರಿಸದಿದ್ದಲ್ಲಿ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ..?

ವಿಜಯ ಸಂಘರ್ಷ 
ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ ಹಾಗು ಸಿದ್ದಾಪುರದಲ್ಲಿ ಹಲವು ಸಮಸ್ಯೆ ಗಳಿದ್ದು, ಇಲ್ಲಿನ ಮತದಾರರು ಈ ಬಾರಿ ಲೋಕಸಭೆ ಚುನಾವಣೆ ಬಹಿಷ್ಕರಿಸುವ ಸಾಧ್ಯತೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್, ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು. 

ಬೇಸಿಗೆಯಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಜನ್ನಾಪುರ ಲಿಂಗಾಯಿತರ ಬೀದಿ ಹಾಗು ಸಿದ್ದಾಪುರ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಬೋರ್‌ವೆಲ್‌ ಗಳನ್ನು ದುರಸ್ತಿ ಮಾಡಿಸುವುದು, ಜಯಶ್ರೀ ಕಲ್ಯಾಣ ಮಂದಿರ ಪಕ್ಕದ ರಸ್ತೆಯಲ್ಲಿ ಡಾ.ಹೆಗ್ಗಡೆ ಮನೆಯ ಹತ್ತಿರವಿರುವ ಕಿರು ನೀರು ಸರಬರಾಜು ಯೋಜನೆಯ ಮೋಟರ್ ಕೆಟ್ಟು ಹೋಗಿದ್ದು, ಈ ಮೋಟರ್ ಜೊತೆಗೆ ನಗರಸಭೆ ವ್ಯಾಪ್ತಿಯ ಎಲ್ಲಾ ಕಿರುನೀರು ಸರಬರಾಜು ಯೋಜನೆಯ ಮೋಟರ್‌ಗಳನ್ನು ತಪಾಸಣೆ ನಡೆಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. 

ಸಿದ್ದಾಪುರ ಸಮೀಪವಿರುವ ಜನ್ನಾಪುರ ಕೆರೆಯಲ್ಲಿ ಕಲ್ಮಶಗೊಂಡ ನೀರು ಶೇಖರಣೆಯಾಗಿರುವುದರಿಂದ ಸೊಳ್ಳೆಗಳ ಹಾವಳಿ ಹಾಗು ರೋಗಾಣುಗಳ ಭೀತಿ ಹೆಚ್ಚಾಗಿದೆ. ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನಲೆಯಲ್ಲಿ ತಕ್ಷಣ ಕೀಟನಾಶಕ ಔಷಧಿ ಸಿಂಪಡಿಸುವುದು ಹಾಗು ಜನ್ನಾಪುರ ಎನ್.ಟಿ.ಬಿ ಕಛೇರಿ ಆವರಣದಲ್ಲಿರುವ ನಗರ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಔಷಧಿ, ಮಾತ್ರೆಗಳನ್ನು ಪೂರೈಸುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು. 

ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಅಧ್ಯಕ್ಷ ಆರ್. ವೇಣುಗೋಪಾಲ್, ಕಾರ್ಯದರ್ಶಿ ಬಿ.ವಿ ಗಿರಿನಾಯ್ಡು, ಸಹಕಾರ್ಯದರ್ಶಿ ಎಂ.ವಿ ಚಂದ್ರಶೇಖರ್, ಉಪಾಧ್ಯಕ್ಷ ವಿಶ್ವೇಶ್ವರಯ್ಯ ಗಾಯಕ್‌ವಾಡ್, ಸುವರ್ಣ ಮಹಿಳಾ ವೇದಿಕೆ ಅಧ್ಯಕ್ಷೆ ಎನ್.ಎಲ್ ರಮಾವೆಂಕಟೇಶ್, ಕಾರ್ಯದರ್ಶಿ ಗೀತಾರವಿಕುಮಾರ್ ಹಾಗು ನಗರಸಭೆ ಸಿಬ್ಬಂದಿ ಪ್ರಶಾಂತ್ ಸೇರಿದಂತೆ ಇನ್ನಿತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು