ವಿಜಯ ಸಂಘರ್ಷ
ಶಿವಮೊಗ್ಗ: ವಿಜ್ಞಾನದ ವಿಸ್ಮಯಗಳು ಮಕ್ಕಳಲ್ಲಿ ತೀವ್ರ ಕೂತೂಹಲ ಮೂಡಿಸುತ್ತದೆ. ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಪ್ರತಿ ನಿತ್ಯ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಪ್ರತಿಯೊಂದು ಮಗುವಿಗೂ ಬಾಲ್ಯದಿಂದಲೇ ವಿಜ್ಞಾನದ ಅರಿವು ಮೂಡಿಸುವುದು ಅಗತ್ಯ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಡ್ವಾನ್ಸ್ಡ್ ಸ್ಕಿಲ್ ಅಕಾಡೆಮಿ, ಹಿಮಾಲಯ ಬಾಹ್ಯಾಕಾಶ ಕೇಂದ್ರ ಹಾಗೂ ಓಪನ್ ಮೈಂಡ್ಸ್ ವರ್ಲ್ಡ್ ವತಿಯಿಂದ ಆಯೋಜಿಸಿದ್ದ 7 ದಿನಗಳ ಯುವ ಗಗನಯಾತ್ರಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಇಸ್ರೋದಲ್ಲಿ ಕೆಲಸ ಮಾಡಲು ವಿಜ್ಞಾನಿಗಳ ಕೊರತೆ ಆಗುವ ಸಾಧ್ಯತೆ ಇದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಇರುವ ಅವಕಾಶಗಳ ಬಗ್ಗೆ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ವೃತ್ತಿಯಾಗಿ ಸ್ವೀಕರಿಸಿ ದೇಶದ ಸಾಧನೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಬಾಹ್ಯಾಕಾಶ ವಿಜ್ಞಾನದ ಬೆಳವಣಿಯಲ್ಲಿ ಮೊದಲ ಹೆಜ್ಜೆಯಾಗಿದ್ದು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಡಿಯಲ್ಲಿ ಗಗನಯಾನ ಬಾಹ್ಯಾಕಾಶ ಪ್ರಯೋಗಾಲಯ ಮಾಡಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಹಿಮಾಲಯ ಬಾಹ್ಯಾಕಾಶ ಕೇಂದ್ರದ ಸಿಇಒ ಅಫ್ರೋಜ್ ಮಾತನಾಡಿ, ಖಗೋಳ ವಿಜ್ಞಾನದ ಬಗ್ಗೆ ಮಕ್ಕಳಿಗೆ ಹೆಚ್ಚಿನ ಮಾಹಿತಿ ನೀಡಬೇಕು. ಆಸಕ್ತಿ ಬೆಳೆಸುವಂತೆ ಮಾಡಬೇಕು ಎಂದರು. ನಂತರ ಬಾಹ್ಯಾಕಾಶ ಮತ್ತು ರಾಕೆಟ್ ತಯಾರಿಕೆ, ಉಡಾವಣೆ ಬಗ್ಗೆ ಮಾಹಿತಿ ನೀಡಿದರು.
ಓಪನ್ ಮೈಂಡ್ಸ್ ವರ್ಲ್ಡ್ ಮ್ಯಾನೇಜಿಂಗ್ ಟ್ರಸ್ಟಿ. ಹಾಗೂ ಪ್ರಾಂಶುಪಾಲರಾದ ಕಿರಣಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಹೊಸ ಹೊಸ ವಿಷಯಗಳ ಕಲಿಕೆಗೆ ಹೆಚ್ಚಿನ ಕಾರ್ಯಕ್ರಮ ಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು. ಶೂನ್ಯ ಗುರುತ್ವಾಕರ್ಷಣ, ರಾಕೆಟ್ ಉಡಾವಣೆ ಕುರಿತ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಬೆಂಗಳೂರು, ಮೈಸೂರು, ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ 70ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಅಡ್ವಾನ್ಸ್ಡ್ ಸ್ಕಿಲ್ ಅಕಾಡೆಮಿ ಸಿಇಒ ಸವಿತಾ ಮಾಧವ್, ಹಿಮಾಲಯ ಬಾಹ್ಯಾಕಾಶ ಕೇಂದ್ರದ ಸಂಸ್ಥಾಪಕರಾದ ವಿರೇಶ್ ಪಾಟೀಲ್, ಶ್ರೀದೇವಿ ರೂಗಿ, ನೇಹಾ ಮತ್ತಿತರರು ಉಪಸ್ಥಿತರಿದ್ದರು.
Tags:
ಶಿವಮೊಗ್ಗ ಸುದ್ದಿ