ವಿಜಯ ಸಂಘರ್ಷ
ಭದ್ರಾವತಿ: ವಿಧಾನ ಪರಿಷತ್ ಮಾಜಿ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಕ್ರೈಸ್ತ ಸಮಾಜದ ಮುಖಂಡರಾದ ಐವಾನ್ ಡಿಸೋಜಾ ರವರು ನಗರದ ಕ್ರೈಸ್ತ ಮುಖಂಡರನ್ನು ಭೇಟಿ ಮಾಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸುವಂತೆ ಕೋರಿದರು.
ತೆಲುಗು ಕ್ರಿಶ್ಚಿಯನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಜೆ.ಭಾಸ್ಕರ್ ಬಾಬು ಅವರ ನಿವಾಸಕ್ಕೆ ಆಗಮಿಸಿದ ಐವನ್ ಡಿಸೋಜಾ ಅವರು, ಕ್ರೈಸ್ತ ಧರ್ಮ ಗುರುಗಳು, ಕ್ರೈಸ್ತ ಮುಖಂಡರು ಹಾಗೂ ಸಮಾಜದ ಬಾಂಧವರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರನ್ನು ಬೆಂಬಲಿಸಿ ಹೆಚ್ಚಿನ ಮತದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ಶಾಂತಿಪ್ರಿಯರಾಗಿರುವ ಕ್ರೈಸ್ತರು ವಿಶ್ವದಲ್ಲಿ ಶೈಕ್ಷಣಿಕ, ಅರೋಗ್ಯ ಕೇಂದ್ರಗಳಲ್ಲಿ ತನ್ನದೇ ಆದ ಚಾಪು ಮೂಡಿಸಿ ಗಮನ ಸೆಳೆದಿದ್ದಾರೆ ಎಂದ ಅವರು ಲೋಕಸಭಾ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಅವರಿಗೆ ತಮ್ಮ ಮತಗಳನ್ನು ನೀಡುವ ಮೂಲಕ ಲೋಕಸಭೆಗೆ ಕಳುಹಿಸಬೇಕು ಹಾಗೂ ಮುಂಬರುವ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ನನಗೆ ಪದವೀಧರರು ಮತಗಳನ್ನು ನೀಡುವ ಮೂಲಕ ಪದವೀಧರ ಸಮಸ್ಯೆಗಳ ಪರಿಹಾರಕ್ಕೆ ಧ್ವನಿಯಾಗಲು ಸಹಕರಿಸಬೇಕೆಂದು ಮನವಿ ಮಾಡಿದರು.
ಧರ್ಮ ಗುರುಗಳಾದ ಜಯರಾಮನ್, ಬಿ ಕೃಪಾದಾನಂ, ಡ್ಯಾನಿಯಲ್ ಜಾನ್, ಬಿ ಸ್ಯಾಮುಯಲ್ ಜಾನ್ಸನ್, ಆರ್.ಪ್ರಭುದಾಸ್, ಜೇಮ್ಸ್ ನಾರಾಯಣ್, ಜಿಲ್ಲಾ ಮುಖಂಡ ರಾದ ಮರಿಯಪ್ಪ, ಶ್ಯಾಮ್ ಸೂಫಿನಾಥನ್, ಸ್ಟೆಲ್ಲಾ ಮಾರ್ಟಿನ್, ಚಿನ್ನಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.