ವಿಜಯ ಸಂಘರ್ಷ
ಭದ್ರಾವತಿ: ಮೆಸ್ಕಾಂ ಲೈನ್‌ಮೆನ್ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿ ರುವ ಆನಂದ್ ರನ್ನು ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ವಿನಾ:ಕಾರಣ ವರ್ಗಾವಣೆ ಮಾಡುವು ದರ ಜೊತೆಗೆ ಮಾನಸಿಕ ಹಿಂಸೆ ನೀಡುತ್ತಿರುವುದು ಖಂಡನೀಯ ಎಂದು ಜೆಡಿಎಸ್ ಮುಖಂಡರು ಕಿಡಿಕಾರಿದರು.
ಗುರುವಾರ ನಗರದ ಜೆಪಿಎಸ್ ಕಾಲೋನಿಯ ಮೆಸ್ಕಾಂ ವಿಭಾಗಿಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಆನಂದ್ ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷರಾಗಿದ್ದು, ಯಾವುದೇ ರೀತಿಯ ಭ್ರಷ್ಟಾಚಾರ, ಕರ್ತವ್ಯಲೋಪ ವೆಸಗದಿದ್ದರೂ ಸಹ ರಾಜಕೀಯ ಪ್ರಭಾವಕ್ಕೆ ಮಣಿದು ದುರುದ್ದೇಶದಿಂದ ಒಂದು ವರ್ಷದ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಐದು ಬಾರಿ ವರ್ಗಾವಣೆ ಮಾಡಿ, ಸಾಲದೆಂಬುದಕ್ಕೆ ಸುಳ್ಳು ಮೊಕದ್ದಮೆ ದಾಖಲಿಸಿ ಭಯದ ವಾತಾವರಣ ನಿರ್ಮಿಸುವ ಮೂಲಕ ನೌಕರ ವರ್ಗದ ನೈತಿಕ ಸೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಅಮಾನತ್ತು ಆದೇಶ ಹಿಂದಕ್ಕೆ ಪಡೆದು ಭದ್ರಾವತಿ ನಗರ ಉಪವಿಭಾಗದ ವ್ಯಾಪ್ತಿಯಲ್ಲಿಯೇ ಆನಂದ್ ರವರನ್ನು ಮುಂದುವರೆಸು ವಂತೆ ಒತ್ತಾಯಿಸಿದರು, ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್.ಕರುಣಾಮೂರ್ತಿ, ಮುಖಂಡರಾದ ಜಯರಾಮ್, ಎಂ.ಎ. ಅಜಿತ್, ನಂಜುಂಡೆಗೌಡ, ಗೊಂದಿ ಜಯರಾಮ್, ಮಧುಸೂದನ್, ಎಸ್. ಕೆ.ಉಮೇಶ್ ಸೇರಿದಂತೆ ಮತ್ತಿತರರಿದ್ದರು.