ವಿಜಯ ಸಂಘರ್ಷ
ಭದ್ರಾವತಿ: ನಗರಸಭಾ ವ್ಯಾಪ್ತಿಯ ಆನೆಕೊಪ್ಪ ಪಂಪ್‌ಹೌಸ್‌ನಲ್ಲಿ ಶುದ್ಧ ಕುಡಿಯುವ ನೀರು ಸರಬರಾಜಿಗಾಗಿ ಸ್ವಚ್ಚತೆ, ಜನ್ನಾಪುರ ಸೇರಿದಂತೆ ನ್ಯೂಟೌನ್ ವ್ಯಾಪ್ತಿಯ ಎಲ್ಲಾ ನೀರಿನ ಟ್ಯಾಂಕುಗಳನ್ನು ಆಧುನಿಕ ತಂತ್ರಜ್ಞಾನ ದಲ್ಲಿ ಸ್ವಚ್ಚ ಮಾಡಿಸಬೇಕೆಂದು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ವೇಣುಗೋಪಾಲ್ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಮಳೆಗಾಲ ಸಮೀಪಿಸುತ್ತಿರುವುದರಿಂದ ಟ್ಯಾಂಕುಗಳಲ್ಲಿ ಕೆಸರು ರಾಡಿ ನೀರು ಶೇಖರಣೆಯಾಗಿರುತ್ತದೆ. ಆದ್ದರಿಂದ ಪಂಪ್‌ಹೌಸ್‌ನಲ್ಲಿ ಇಂಟೆಕ್ ತೊಟ್ಟಿಯನ್ನು ಸ್ವಚ್ಚ ಮಾಡಿಸಿ ಕೆಟ್ಟು ಹೋಗಿರುವ ಸ್ಟಾಂಡ್ ಬೈ ಮೋಟಾರನ್ನು ರಿಪೇರಿ ಮಾಡಿಸಿ ಜಾಕ್‌ವೆಲ್‌ನಲ್ಲಿ ಜಾಲರಿ ಅಳವಡಿಸಬೇಕು, ಜನ್ನಾಪುರ ವ್ಯಾಪ್ತಿಯ ಟ್ಯಾಂಕ್‌ಗಳನ್ನು ಆಧುನಿಕ ತಂತ್ರಜ್ಞಾನದಿಂದಿ ಸ್ವಚ್ಚಗೊಳಿಸಿ ಕುಡಿಯುವ ನೀರು ಸರಬರಾಜು
ಮಾಡುವುದರಿಂದ ಸಾಂಕ್ರಾಮಿಕ ರೋಗ ಗಳನ್ನು ತಡೆಯಬಹುದಾಗಿದೆ. ನಗರಸಭೆಗೆ ಸೇರಿದ 70 ಕ್ಕೂ ಹೆಚ್ಚಿರುವ ಕೆರೆಗಳ ಬೌಂಡರಿಗಳನ್ನು ನಿಗದಿ ಮತ್ತು ಅಭಿವೃದ್ದಿ ಪಡಿಸಿ ಅಂತರ್ಜಲ ಹೆಚ್ಚಿಸುವ ಕಾರ್ಯ ಎಸಗಿ ನೀರು ಶೇಖರಣೆಗೆ ಮುಂದಾಗಬೇಕು. ಜನ ಜಾನುವಾರುಗಳಿಗೆ ಅನುಕೂಲ ಕಲ್ಪಿಸಬೇಕು. ಇವೆಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ನಗರಸಭೆಗೆ ಆರ್ಥಿಕ ಹೊರೆ ತಪ್ಪಿಸಲು ಕೆರೆಯ ಸಮೀಪ ವಿರುವ ರೈತರ ತೋಟ ಹೊಲ ಗದ್ದೆಗಳಿಗೆ ಕೆರೆಯ ಹೂಳನ್ನು ಶರತ್ತು ಬದ್ದ ಸರಬರಾಜಿಗೆ ಅನುಮತಿ ನೀಡಬೇಕೆಂದು ಮನವಿ ನೀಡಿದರು.
ಮನವಿ ಸ್ವೀಕರಿಸಿದ ನಗರಸಭೆ ಪೌರಾಯುಕ್ತ ಪ್ರಕಾಶ ಎಂ. ಚೆನ್ನಪ್ಪನವರ್ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸುವರ್ಣ ಮಹಿಳಾ ವೇದಿಕೆ ಅಧ್ಯಕ್ಷೆ ಎನ್.ಎಲ್.ರಮಾ ವೆಂಕಟೇಶ್, ಗೀತಾ ರವಿಕುಮಾರ್, ಶೈಲಜಾ ರಾಮಕೃಷ್ಣ, ರಾಧಾ ಗೋಪಿ, ವಿಶ್ವೇಶ್ವರರಾವ್ ಗಾಯಕ್ವಾಡ್, ಎಂ.ವಿ.ಚಂದ್ರಶೇಖರ್, ಗೋಪಾಳಕೃಷ್ಣ ಮತ್ತಿತರಿದ್ದರು.