. *ಬರ*

ವಿಜಯ ಸಂಘರ್ಷ 

ಹಾದಿಯಲ್ಲಿ ನಲಿದ ಗರಿಕೆ
ಮುದುರಿ ನೆಲವ ಕಚ್ಚಿತು
ಬೀದಿಯಲ್ಲಿ ಬೀಸೋ ಗಾಳಿ
ಬಿಸಿಯ ಉಸಿರ ಕಕ್ಕಿತು

ಬರದ ಛಾಯೆ ಬಡಿದು ರೈತ
ಬದುಕಿಗಂಜಿ ನರಳಿದ
ಎದಿರುಗಾಣ್ವ ಬವಣೆ ಅರಿತು
ವರುಣನನ್ನೇ ಶಪಿಸಿದ

ಕಾಡಗಿಚ್ಚು ವನಕೆಲ್ಲಕು ಹರಡಿ
ಸರ್ವ ಸಂಹಾರ ಮಾಡಿತು
ಖಗ ಮೃಗ ವನಚರವು ಚೀರಾಡಿ
ದಿಕ್ಕಗೆಟ್ಟು ದಾರಿತಪ್ಪಿ ಓಡಿತು

ಬೆವರ ಸೆಲೆಗೆ ಸೋತು ಕಾಯ
ಬಳಲಿ ನರಳಿ ನಲುಗಿತು
ಬೇಗೆಯಿಂದ ಸೊರಗಿ ತರುವು
ಜಲದ ತಾಣ ಅರಸಿತು

ಮುಗಿಲಿಗಾತ ಹೊಗೆಯ ಸ್ಪರ್ಶ
ಹಗೆಯ ರೂಪ ತಾಳಿತು
ಮೋಡ ತಾನು ತಡೆದು ವರ್ಷ
ಕುಹಕ ಮಾಡಿ ನಕ್ಕಿತು

ಮಾಲಾ ಚೆಲುವನಹಳ್ಳಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು