ವಿಜಯ ಸಂಘರ್ಷ
ಭದ್ರಾವತಿ: ನಗರದ ಹೃದಯ ಭಾಗದಲ್ಲಿ ನಿರ್ಮಾಣ ವಾಗುತ್ತಿರುವ ಡಾ:ಬಿ.ಆರ್ ಅಂಬೇಡ್ಕರ್ ಭವನ ವನ್ನು ಶೀಘ್ರದಲ್ಲಿಯೇ ಉದ್ಘಾಟಿಸ ಬೇಕೆಂದು ಒತ್ತಾಯಿಸಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿಯ ಪ್ರಧಾನ ಗೌರವಾಧ್ಯಕ್ಷ ಡಿ.ಸಿ.ಮಾಯಣ್ಣನವರ ನೇತೃತ್ವದಲ್ಲಿ ಜೂ: 10 ರಂದು ಬೆಳಗ್ಗೆ 11 ಗಂಟೆಯಿಂದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಬಿ.ಎನ್. ರಾಜು ತಿಳಿಸಿದರು.
ದಲಿತ ಚಳುವಳಿ ಹುಟ್ಟಿದ ಭದ್ರಾವತಿ ನಗರದಲ್ಲಿ ಕಳೆದ 25 ವರ್ಷಗಳಿಂದ ವಿದ್ಯಾರ್ಥಿ, ಸಂಘ ಸಂಸ್ಥೆಗಳಿಗೆ, ಸಾರ್ವಜನಿಕರಿಗೆ ಮತ್ತು ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಲು ವಿಶಾಲವಾದ ಡಾ.ಬಿ.ಆರ್ ಅಂಬೇಡ್ಕರ್ ಭವನಕ್ಕಾಗಿ ಹಲವಾರು ಬಾರಿ ಹೋರಾಟಗಳನ್ನು ನಡೆಸ ಲಾಗಿತ್ತು. 2018ರಲ್ಲಿ ಅಂದಿನ ಶಾಸಕ ಎಂ.ಜೆ ಅಪ್ಪಾಜಿಯವರು, ಬಿಇಓ ಕಚೇರಿಯ ಪಕ್ಕ ಗುದ್ದಲಿ ಪೂಜೆ ನೆರವೇರಿಸಿದ್ದ, ಭವನ ಕಾಮಗಾರಿಯು ಪದೇ ಪದೇ ಅನುದಾನ ವಿಲ್ಲದೆ ಕಾಮಗಾರಿ ನಿಲ್ಲಿಸಿ, ನಿರ್ಲಕ್ಷಕ್ಕೆ ಒಳಗಾಗಿದ್ದು ಹೋರಾಟ ಸಮಿತಿಯ ನೇತೃತ್ವದಲ್ಲಿ ಹಲವಾರು ಹೋರಾಟ ಗಳನ್ನು ನಡೆಸಿ ಸಂಬಂಧ ಪಟ್ಟವರ ಗಮನ ಸೆಳೆಯಲಾಗಿತ್ತು.
ಡಾ. ಬಿ.ಆರ್.ಅಂಬೇಡ್ಕರ್ ಭವನ ಕ್ಕಾಗಿ ಇದುವರೆಗೂ ರಾಜ್ಯ ಸರ್ಕಾರ ದಿಂದ 2 ಕೋಟಿ ರೂ.ನಗರಸಭೆ ಯಿಂದ 50 ಲಕ್ಷ ರೂ.,ಸಂಸದರ ನಿಧಿಯಿಂದ 25 ಲಕ್ಷ ರೂ., ಸಮಾಜ ಕಲ್ಯಾಣ ಇಲಾಖೆಯಿಂದ 1.50 ಕೋಟಿ ರೂ. ಬಿಡುಗಡೆಯಾಗಿರುತ್ತದೆ. ಡಾ. ಬಿ ಆರ್.ಅಂಬೇಡ್ಕರ್ ಭವನದ ಕಾಮಗಾರಿಯ ಬಗ್ಗೆ ಶಾಸಕ ಬಿ.ಕೆ ಸಂಗಮೇಶ್ವರ ಅಧಿವೇಶನದಲ್ಲಿಯೂ ಸಹ ಚರ್ಚೆ ನಡೆಸಿದ್ದರು. ಈಚೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅಂಬೇಡ್ಕರ್ ಭವನದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹಣ ಬಿಡುಗಡೆಗೊಳಿಸು ವುದಾಗಿ ತಿಳಿಸಿದ್ದರು. ಅದರಂತೆ ರಾಜ್ಯ ಸರ್ಕಾರದಿಂದ ಸುಮಾರು 1.50 ಕೋಟಿ ರೂ. ಬಿಡುಗಡೆ ಗೊಳಿಸಿದ್ದ ಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ, ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ರವರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರಿಗೂ, ಶಾಸಕರ ನಿಧಿ ಯಿಂದ 37 ಲಕ್ಷ ರೂ. ಬಿಡುಗಡೆಗೊಳಿ ಸಿದ ಶಾಸಕ ಬಿ.ಕೆ ಸಂಗಮೇಶ್ವರ ಅವರಿಗೂ, ಸಂಸದರ ನಿಧಿ ಯಿಂದ 25 ಲಕ್ಷ ರೂ. ಬಿಡುಗಡೆ ಮಾಡಿದ ಬಿ.ವೈ ರಾಘವೇಂದ್ರ ಅವರಿಗೂ ಹೋರಾಟ ಸಮಿತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದು ವಿವರಿಸಿದರು.
ಸಮಿತಿಯ ಪ್ರಮುಖರು ಮಾತನಾಡಿ, 2018 ರಿಂದ ಪ್ರಾರಂಭಿಸಿದ ಅಂಬೇಡ್ಕರ್ ಭವನ ಕಾಮಗಾರಿಯು ನಿರ್ಲಕ್ಷ್ಯದಿಂದ ಸಾಗುತ್ತಿದ್ದು , ಬಿಡುಗಡೆ ಗೊಳಿಸಿದ ಹಣದಿಂದ ನಿರ್ಮಿತಿ ಕೇಂದ್ರವು ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸಬೇಕು. ಅಂಬೇಡ್ಕರ್ ಭವನದ ನೆಲಮಾಳಿಗೆಯಲ್ಲಿ ಗ್ರಂಥಾಲಯ ಪ್ರಾರಂಭಿಸಬೇಕು. ಭವನದ ಉದ್ಘಾಟನೆಯನ್ನು ಗೌರವದಿಂದ ಅತ್ಯಂತ ವಿಜ್ರಂಭಣೆ ಯಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಬೇಕು. ಮುಖ್ಯಮಂತ್ರಿಗಳಾದಿಯಾಗಿ ಎಲ್ಲಾ ಸಚಿವರು ಮತ್ತು ಎಲ್ಲಾ ಶಾಸಕರು ಒಳಗೊಂಡಂತೆ ಜಿಲ್ಲಾ ಮಂತ್ರಿ ಎಸ್. ಮಧು ಬಂಗಾರಪ್ಪ ಹಾಗೂ ಶಾಸಕ ಬಿ.ಕೆ ಸಂಗಮೇಶ್ವರ ರವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿ ಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಬೇಕೆಂದು ಅಗ್ರಹಿಸಿದರು.
ಅಂಬೇಡ್ಕರ್ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ಮತ್ತು ಭಾರತ ಸಂವಿಧಾನದ ಬಗ್ಗೆ ಕ್ಷೇತ್ರದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿಚಾರ ಸಂಕಿರಣ ಸಭೆ ಸಮಾರಂಭ ವನ್ನು ನಡೆಸುವುದರ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕ ರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಬೇಕಾಗಿದೆ. ರಾಜ್ಯ ಸರ್ಕಾರದ ವತಿಯಿಂದ ರಾಜ್ಯದ ಎಲ್ಲಾ ಅಂಬೇಡ್ಕರ್ ಅಭಿಮಾನಿ ಗಳನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸುವ ಪ್ರಯತ್ನವನ್ನು ಮಾಡಬೇಕಾಗಿದೆ ಎಂದರು.
ಅಂಡರ್ ಬ್ರಿಡ್ಜ್ ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಬದಲಾಗಿ ಸಿದ್ಧಗೊಂಡಿರುವ 12 ಅಡಿಯ ಡಾ.ಬಿ.ಆರ್ ಅಂಬೇಡ್ಕರ್ ರವರ ನೂತನ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ, ಅಂಬೇಡ್ಕರ್ ಭವನ ಉದ್ಘಾಟನೆ ದಿನದಂದೇ ಅಂಬೇಡ್ಕರ್ ಪ್ರತಿಮೆಯನ್ನು ಸಹ ಅನಾವರಣ ಮಾಡಬೇಕೆಂದು ಸಮಿತಿ ವತಿಯಿಂದ ಒತ್ತಾಯಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಭವನ ಸಮಿತಿಯ ಡಿ.ಸಿ.ಮಾಯಣ್ಣ, ಪ್ರೊ.ಚಂದ್ರಶೇಖರ್, ಟಿ.ಜಿ ಬಸವ ರಾಜಯ್ಯ, ಆಂಜನೇಯ, ಸೆಲ್ವರಾಜ್ (ಗ್ಯಾಸ್), ಅನಂತರಾಮು, ಐ.ಎಲ್ ಅರುಣ್ ಕುಮಾರ್ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.