ವಿಜಯ ಸಂಘರ್ಷ
ಭದ್ರಾವತಿ: ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿಯು ನಿರ್ಲಕ್ಷ್ಯದಿಂದ ಸಾಗುತ್ತಿದ್ದು ಬಿಡುಗಡೆಗೊಳಿಸ ಲಾಗಿರುವ ಹಣದಿಂದ, ನಿರ್ಮಿತಿ ಕೇಂದ್ರವು ಕೂಡಲೇ ಕಾಮಗಾರಿ ಯನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿ ಡಾ.ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿ ವತಿಯಿಂದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಸಮಾಜ ಕಲ್ಯಾಣ ಅಧಿಕಾರಿ ಕೆ.ಗೋಪಾಲಪ್ಪ ರವರ ಮೂಲಕ ಶಾಸಕ ಬಿ.ಕೆ.ಸಂಗಮೇಶ್ವರ್ ರವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಪ್ರಧಾನ ಗೌರವಾಧ್ಯಕ್ಷ ಹಿರಿಯ ಕಾರ್ಮಿಕ ಮುಖಂಡ ಡಿ ಸಿ ಮಾಯಣ್ಣ ಹಾಗೂ ಅಧ್ಯಕ್ಷ ಬಿ.ಎನ್ ರಾಜು ರವರು ಮಾತನಾಡಿ, ಭವನದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜ್ರಂಭಣೆಯಿಂದ ಉದ್ಘಾಟಿಸಬೇಕೆಂದು ಮತ್ತು ಉಪ ಮುಖ್ಯಮಂತ್ರಿಗಳಾದಿಯಾಗಿ ರಾಜ್ಯದ ಎಲ್ಲಾ ಸಚಿವರು ಮತ್ತು ಎಲ್ಲಾ ಶಾಸಕರು ಒಳಗೊಂಡಂತೆ ಜಿಲ್ಲಾ ಮಂತ್ರಿ ಎಸ್.ಮಧು ಬಂಗಾರಪ್ಪ ಹಾಗೂ ಭದ್ರಾವತಿ ಶಾಸಕರಾದ ಬಿ.ಕೆ ಸಂಗಮೇಶ್ವರ ರವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಭದ್ರಾವತಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಬೇಕೆಂದು ಒತ್ತಾಯಿಸಿದ ಅವರು,ಭವನದ ನೆಲಮಾಳಿಗೆಯಲ್ಲಿ ಗ್ರಂಥಾಲಯ ಪ್ರಾರಂಭಿಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಭವನದ ಉದ್ಘಾಟನೆಯ ಸಂದರ್ಭ ದಲ್ಲಿ ಸಂವಿಧಾನ ಶಿಲ್ಪಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ಮತ್ತು ಭಾರತ ಸಂವಿಧಾನದ ಬಗ್ಗೆ ಭದ್ರಾವತಿಯ ಎಲ್ಲಾ ಶಾಲಾ ಕಾಲೇಜು ಗಳಲ್ಲಿ ವಿಚಾರ ಸಂಕಿರಣ ಸಭೆ ಸಮಾರಂಭವನ್ನು ನಡೆಸುವುದರ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಬೇಕಾಗಿದೆ. ರಾಜ್ಯದ ಎಲ್ಲಾ ಅಂಬೇಡ್ಕರ್ ಅಭಿಮಾನಿಗಳನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಬೇಕಾಗಿದೆ ಎಂದರು.
ಧರಣಿ ಸತ್ಯಾಗ್ರಹದಲ್ಲಿ ಸಮಿತಿಯ ಗೌರವ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ಎಸ್.ಆಂಜನೇಯ, ಐ.ಎಲ್ ಅರುಣ್ ಕುಮಾರ್, ಕಾರ್ಯಾಧ್ಯಕ್ಷ ಸಿ.ಮಹಾಲಿಂಗಪ್ಪ, ಸೇಲ್ವರಾಜ್, ಪ್ರಧಾನ ಕಾರ್ಯದರ್ಶಿ ಬ್ರಹ್ಮಲಿಂಗಯ್ಯ, ಅಕ್ರಂಖಾನ್, ಸಂಚಾಲಕ ಎಂ.ವಿ ಚಂದ್ರಶೇಖರ್, ಆಮೀರ್, ಪತ್ರೇಶ್, ಜಯಮ್ಮ, ಭಾಗ್ಯಮ್ಮ, ರಂಗಮ್ಮ, ರುದ್ರೇಶಪ್ಪ, ಸತೀಶ್, ಅಜಯ್, ನಿಂಗರಾಜು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.