ವಿಜಯ ಸಂಘರ್ಷ
ಭದ್ರಾವತಿ: ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಶಂಕೆ ಇದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕು, ಅಲ್ಲದೆ ಈಗ ನಡೆದಿರುವ ಪರೀಕ್ಷೆ ರದ್ದುಪಡಿಸಿ ಮರು ಪರೀಕ್ಷೆ ನಡೆಸ ಬೇಕೆಂದು NSUI ತಾಲ್ಲೂಕು ಘಟಕ ಆಗ್ರಹಿಸಿ ತಹಶೀಲ್ದಾರ್ ಮೂಲಕ ಸೋಮವಾರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ನೀಟ್ ಪರೀಕ್ಷೆಯ ಫಲಿತಾಂಶ ವಿವಾದ ಗಳಿಂದ ಕೂಡಿದ್ದು, ಭಾರಿ ಅಕ್ರಮ ನಡೆದಿರುವ ಸಾಧ್ಯತೆಯಿದೆ. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವಿವಾದಾತ್ಮಕ ಫಲಿತಾಂಶದ ಕಾರಣದಿಂದ ದೇಶದ ಲಕ್ಷಾಂತರ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಕೇಂದ್ರ ಸರ್ಕಾರವು ನೀಟ್ ಅಕ್ರಮದ ಬಗ್ಗೆ ಹನಿಖೆ ನಡೆಸಬೇಕೆಂಬುದು ದೇಶಾದ್ಯಂತ ಇರುವ ವಿದ್ಯಾರ್ಥಿಗಳ ಅಗ್ರಹವಾಗಿದೆ. ನೀಟ್ ಫಲಿತಾಂಶ ವಿವಾದವಾಗಲು ಆನೇಕ ಅಂಶಗಳು ಕಾರಣವಾಗಿದ್ದು, ಒಟ್ಟು 67 ವಿದ್ಯಾರ್ಥಿ ಗಳು ಮೊದಲ ಪ್ರಥಮ ಮೊದಲ ರ್ಯಾಂಕ್ ಬಂದಿರುವುದು ಹಾಗೂ ಒಂದೇ ಪರೀಕ್ಷಾ ಕೇಂದ್ರದ ವಿದ್ಯಾರ್ಥಿ ಗಳು ಪ್ರಥಮ ರ್ಯಾಂಕ್ ಮಾಡಿರುವುದು ನೀಟ್ ಅಕ್ರಮ ನಡೆದಿರುವುದಕ್ಕೆ ಸಾಕ್ಷಿಯಂತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರ್ಯಾಂಕ್ ಬಂದಿರುವವರಲ್ಲಿ ಆರು ವಿದ್ಯಾರ್ಥಿಗಳು ಒಂದೇ ತರಬೇತಿ ಕೇಂದ್ರದವ ರಾಗಿರುವುದು ಮತ್ತಷ್ಟು ಅನುಮಾನಗಳನ್ನು ಹುಟ್ಟಿಹಾಕಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಒಂದೇ ತರಬೇತಿ ಕೇಂದ್ರ ಇವೆಲ್ಲವೂ ನೀಟ್ ಪರೀಕ್ಷೆಯಲ್ಲಿ ಅಕ್ರಮಕ್ಕೆ ಕಾರಣ ವಾಗಿರುವ ಸಾಧ್ಯತೆ ಇದೆ ಎಂಬುದು ವಿದ್ಯಾರ್ಥಿಗಳ ದೂರು. ತರಾತುರಿಯಲ್ಲಿ ಕೃಪಾಂಕ ನೀಡಿರುವುದು, ಲೋಕಸಭೆ ಚುನಾವಣಾ ಫಲಿತಾಂಶ ದಿನದಂದು ನೀಟ್ ಫಲಿತಾಂಶ ಪ್ರಕಟಿಸಿರುವುದು, ಅನುಮಾನಗಳನ್ನು ಹೆಚ್ಚಿಸಿದೆ ಎಂದು ಕಿಡಿಕಾರಿದರು.
ನೀಟ್ ಪರೀಕ್ಷೆ ಫಲಿತಾಂಶ ನಂತರ ದೇಶದ ಕೆಲವೆಡೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವವಿದ್ಯಾರ್ಥಿಗಳು ಪ್ರಾಣ ಕಳೆದು ಕೊಳ್ಳದಂತೆ ಸೂಕ್ತ ನಿರ್ಧಾರ ತೆಗೆದು ಕೊಳ್ಳಬೇಕಿದೆ. ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದರಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಈಗ ನಡೆದಿರುವ ಪರೀಕ್ಷೆ ರದ್ದುಪಡಿಸಿ ಕೂಡಲೇ ಮರು ಪರೀಕ್ಷೆ ನಡೆಸಬೇಕು ಎಂಬುದು ದೇಶದ ವೈದ್ಯಕೀಯ ಸೀಟು ಆಕಾಂಕ್ಷಿಗಳು ಹಾಗೂ ಓದುಗರ ಆಗ್ರಹವಾಗಿದೆ ಎಂದು ತಹಶೀಲ್ದಾರ್ ರವರ ಮೂಲಕ ರಾಷ್ಟ್ರಪತಿಗಳಿಗೆ NSUI ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.
NSUI ಅಧ್ಯಕ್ಷ ಮುಸವಿರ್ ಭಾಷಾ ಪ್ರತಿಭಟನೆಯ ನೇತೃತ್ವವಹಿಸಿದ್ದರು. ಮುರುಗೇಶ್, ಗಂಗಾಧರ್ ತಿಪ್ಪೇಸ್ವಾಮಿ, ಶ್ಯಾಮ್ ಬಾಬು, ಸುಹೇಲ್, ಕಿರಣ್, ಪ್ರಮೋದ್ ಸೇರಿದಂತೆ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.