ವಿಜಯ ಸಂಘರ್ಷ
ಭದ್ರಾವತಿ: ಹಿರಿಯ ರಾಜಕಾರಣಿ, ಸಮಾಜವಾದಿ ಹೋರಾಟಗಾರ ಕಾಗೋಡು ತಿಮ್ಮಪ್ಪ ಅವರನ್ನು ಬಗರ್ ಹುಕುಂ ರೈತರ ಹೋರಾಟದಲ್ಲಿ ಭಾಗವಹಿಸಲು ಸಾಗರದ ಅವರ ಸ್ವಗೃಹದಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಮಾಡಲಾಯಿತು.
ಪ್ರಸ್ತುತ ಅನೇಕ ಜನಪ್ರತಿನಿಧಿಗಳು, ರಾಜಕಾರಣಿಗಳು, ಮತ್ತವರ ಸಹಚರರು, ಕುಟುಂಬಸ್ಥರು, ಸಂಬಂಧಿಕರು ಹೀಗೆ ಕಾನೂನು ಉಲ್ಲಂಘಿಸಿ ಸಾಗುವಳಿ ಪತ್ರಗಳನ್ನು ಪಡೆದುಕೊಂಡಿರುತ್ತಾರೆ. ಅಲ್ಲದೆ ಬಗರ್ ಹುಕುಂ ಹಾಗು ಅರಣ್ಯ ವ್ಯಾಪ್ತಿ ಸಾಗುವಳಿದಾರರ ಪರವಾಗಿ ಇರುವುದಾಗಿ ಹೇಳಿ ಅವರ ಮತಗಳಿಂದ ಅಧಿಕಾರ ಪಡೆದುಕೊಂಡು ಇದೀಗ ಅವರಿಂದ ಜಮೀನು ಕಿತ್ತುಕೊಂಡು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿ ರುವ ಬಗರ್ ಹುಕುಂ ಜಮೀನು, ಅರಣ್ಯ ವ್ಯಾಪ್ತಿಯ ಜಮೀನು ಸಾಗುವಳಿದಾರರಿಂದ ದೌರ್ಜನ್ಯದಿಂದ ಹಾಗೂ ಕಾನೂನು ದುರ್ಬಳಕೆ ಮಾಡಿಕೊಂಡು ಜಮೀನು ಕಿತ್ತುಕೊಳ್ಳುವ ಹುನ್ನಾರ ನಡೆಸಲಾಗುತ್ತಿದೆ ಎಂದು ವಿವರಿಸಲಾಯಿತು.
ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಸನ್ಮಾನಿಸುವ ಜೊತೆಗೆ ರೈತರ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು.