ವಿಜಯ ಸಂಘರ್ಷ
ಶಿವಮೊಗ್ಗ: ಶಿಕ್ಷಣದ ಜತೆಗೆ ಕೌಶಲ್ಯ ಕಲಿಕೆಯೂ ಅತ್ಯಂತ ಅವಶ್ಯಕ. ಕೌಶಲ್ಯ ಕಲಿಕೆಯಿಂದ ಜೀವನದಲ್ಲಿ ಸಾಧನೆ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ ಎಂದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಅರುಣ್ ದೀಕ್ಷಿತ್ ಹೇಳಿದರು.
ನಗರದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಹಾಗೂ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ನೋಟ್ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿ ಸಂಘ ಇಂಟರ‍್ಯಾಕ್ಟ್ ಕ್ಲಬ್ ಉದ್ಘಾಟಿಸಿ ಮಾತನಾಡಿ, ಉತ್ತಮ ಜೀವನ ರೂಪಿಸಿಕೊಳ್ಳಲು ಗುರು ಹಿರಿಯರ ಮಾರ್ಗದರ್ಶನದ ಜತೆಯಲ್ಲಿ ಒಳ್ಳೆಯ ಆಲೋಚನೆಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ರೋಟರಿ ಸಹಾಯಕ ಮಾಜಿ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಮಕ್ಕಳಲ್ಲಿ ನಾಯಕತ್ವ ಗುಣದ ಜತೆಗೆ ಸಂವಹನ ಕಲೆ, ಗುಂಪು ಚರ್ಚೆ ಮತ್ತು ಉತ್ತಮ ಫಲಿತಾಂಶ ಪಡೆಯಲು ಇಂಟರ‍್ಯಾಕ್ಟ್ ಕ್ಲಬ್ ಸಹಕಾರಿ ಆಗುತ್ತದೆ. ಫ್ಲೋರಿಡಾ ದೇಶದಲ್ಲಿ ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಸ್ಥಾಪಿತ ವಾದ ಇಂಟರ‍್ಯಾಕ್ಟ್ ಕ್ಲಬ್ ಇಂದಿಗೂ ರೋಟರಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದರು.
ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ವಾಗ್ದೇವಿ ಬಸವರಾಜ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಪಾಲಕರ ಕೀರ್ತಿ ಹೆಚ್ಚಿಸಬೇಕು ಎಂದರು. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಇನ್ನರ್‌ವ್ಹೀಲ್‌ನಿಂದ ವಿತರಿಸಲಾಯಿತು.
ಡಾ.ಕಡಿದಾಳ್ ಗೋಪಾಲ್ ಮಾತನಾಡಿ, ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಯಲ್ಲಿ 600 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ. ನೀಡಲಾಗುವುದು ಎಂದರು.
ಕ್ಲಬ್ ಚೇರ್ಮನ್ ಶೇಷಗಿರಿಗೌಡ ಹೈಸ್ಕೂಲ್ ವಿಭಾಗದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶಬ್ಧಕೋಶ ನೀಡಿ ಗೌರವಿಸಿದರು.
ಕ್ಲಬ್ ನೂತನ ಅಧ್ಯಕ್ಷರಾಗಿ ಹರ್ಷಿತಾ ಹಾಗೂ ಕಾರ್ಯದರ್ಶಿಯಾಗಿ ಪ್ರಜ್ವಲ್ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮ ದಲ್ಲಿ ಕೊಳಿಗೆ ವಾಸಪ್ಪಗೌಡ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಲತಾ ಸೋಮ ಶೇಖರ್, ಶಬರಿ ಕಡಿದಾಳ್, ಟಿ.ಪಿ. ನಾಗರಾಜ್, ಗುರುಮೂರ್ತಿಗೌಡ, ಸಲ್ಮಾ, ಡಾ.ಧನಂಜಯ ಉಪಸ್ಥಿತರಿದ್ದರು.
Tags:
ಶಿವಮೊಗ್ಗ ಸುದ್ದಿ