ವಿಜಯ ಸಂಘರ್ಷ
ಶಹಾಪುರ: ಬಾಲಕಾರ್ಮಿಕ ಪದ್ಧತಿ ಯನ್ನು ನಿರ್ಮೂಲನೆ ಮಾಡಲು ತಪಾಸಣೆ ಜೊತೆಗೆ ಕಾನೂನು ಅರಿವು-ನೆರವು ಮತ್ತು ಜನ- ಜಾಗೃತಿ ಕಾರ್ಯಕ್ರಮ ಆಯೋಜಿಸುವುದ ರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ ಎಂದು ಉಪ-ತಹಸೀಲ್ದಾರ್ ಸೇತುಮಾಧವ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಪಂ, ಕಾರ್ಮಿಕ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆ,ಜಿಲ್ಲಾ ಬಾಲ ಕಾರ್ಮಿಕ ಸೊಸೈಟಿ, ರೆಸ್ಕ್ಯೂ ಅಂಡ್ ರೆಹಬೀಲೇಶನ್ ಕ್ಯಾಂಪಯಿಂಗ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾನೂನು ಅರಿವು ನೆರವು ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲೆ ಬಿಟ್ಟು ಕೃಷಿ ಮತ್ತು ಇತರೆ ಕೆಲಸಗಳಿಗೆ ಮಕ್ಕಳು ಹೋಗದಂತೆ ಶಾಲಾ ಶಿಕ್ಷಕರಿಂದ, ಪಾಲಕ ಪೋಷಕ ರಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ನಂತರ ನಗರದ ಬಸವೇಶ್ವರ ವೃತ್ತ, ಮಾರುಕಟ್ಟೆ ಹಾಗೂ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಹಠಾತ್ ದಾಳಿ/ತಪಾಸಣೆ ನಡೆಸಿ, 12 ಮಕ್ಕಳನ್ನು ರಕ್ಷಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಯಿತು.
ಸಹಾಯಕ ಸರ್ಕಾರಿ ಅಭಿಯೋಜಕ ರಾದ ದಿವ್ಯರಾಣಿ ರವರು ಮಾತನಾಡಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ನವದೆಹಲಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಮತ್ತು ಕಾರ್ಮಿಕ ಆಯುಕ್ತರು ಬೆಂಗಳೂರು ರವರ ಸೂಚನೆಯಂತೆ, ಸ್ವತಂತ್ರ ದಿನಾಚರಣೆ 2024ರ ಅಂಗವಾಗಿ ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿಗೊಳಿಸಿ ಶಿಕ್ಷಣ ಮುಂದುವರಿಕೆಗೆ ಅವಕಾಶ ಮಾಡಿ ಕೊಡುವ ಉದ್ದೇಶದಿಂದ ದಿನಾಂಕ: 01.08.2024 ರಿಂದ 31.08.2024ರ ರವರೆಗೆ ರಕ್ಷಣಾ ಕಾರ್ಯಚರಣೆಗೆ ಸರಕಾರದ ಪ್ರತಿಯೊಂದು ಇಲಾಖೆಯು ಕೈಜೊಡಿಸಿದಾಗ ಮಾತ್ರ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಎಂಬ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ಮಾತನಾಡಿ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಸಬೇಕೆಂದು ಕಾರ್ಮಿಕ ಇಲಾಖೆಯಿಂದ ನಿರಂತರವಾಗಿ ಜನ-ಜಾಗೃತಿ, ಕಾನೂನು ಅರಿವು-ನೆರವು ಕಾರ್ಯಕ್ರಮ, ಬೀದಿನಾಟಕಗಳನ್ನು ನಡೆಸಲಾಗುತ್ತಿದೆ. ಇದನ್ನು ಮೀರಿಯೂ ಸಹ ಮಕ್ಕಳನ್ನು ಕೆಲಸಕ್ಕೆ ನೇಮಿಸಿ ಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.
ಶಹಾಪುರ ಕಾರ್ಮಿಕ ನಿರೀಕ್ಷಕರಾದ ಸಾಬೇರಾ ಬೇಗಂ ಮಾತನಾಡಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ರೂ, 20 ಸಾವಿರ ರೂಗಳಿಂದ 50 ಸಾವಿರ ರೂ ಗಳವರೆಗೆ ದಂಡ ಮತ್ತು 6 ತಿಂಗಳಿoದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನು ಸಹ ವಿಧಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ್ಯಾನಲ್ ವಕೀಲರಾದ ಸತ್ಯಮ್ಮ ಹೊಸಮನಿ, ಸಿದ್ದು ಪಸ್ಪುಲ್, ಲಕ್ಷ್ಮಿಕಾಂತ್ ಶಿಬರಬಂಡಿ, ಶಿರಸ್ತೇದಾರ ಸೋಮನಾಥ ಅಂಗಡಿ, ಸಂಗಣ್ಣ ನುಚ್ಚಿನ್ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಬಾಲರಾಜ್ ಕೋರಬಾರ, ಸಮಾಜ ಕಲ್ಯಾಣ ಕಾರ್ಮಿಕ ಇಲಾಖೆಯ ಮೊಹಮ್ಮದ್ ಏಥೇಶ್ಯಾಮ್, ಬಾಲು ನಾಯಕ, ಮಾರ್ಗದರ್ಶಿ ಸಂಸ್ಥೆಯ ಸಿಬ್ಬಂದಿಗಳು, ಮಕ್ಕಳ ರಕ್ಷಣಾ ಘಟಕದ ಪರ್ವತ ರೆಡ್ಡಿ, ಮಕ್ಕಳ ಸಹಾಯವಾಣಿ 1098 ನ ಮಹೇಶ ಕುಮಾರ್, ಪೋಲಿಸ್ ಇಲಾಖೆ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
(✍️ವರದಿ ಶಿವು ರಾಠೋಡ)
Tags:
ಶಹಾಪುರ ಸುದ್ದಿ