ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ವಿದ್ಯಾರ್ಥಿಗಳ ಯೋಚನಾ ಲಹರಿ ತಿಳಿದುಕೊಂಡು ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜ, ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ರಾಷ್ಟ್ರೀಯ ಶಿಕ್ಷಣ ಸಮಿತಿ, ರಾಷ್ಟ್ರೀಯ ಶಿಕ್ಷಣ ಮಹಾ ವಿದ್ಯಾಲಯದಿಂದ ಆಯೋಜಿಸಿದ್ದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳ ಪ್ರದರ್ಶನ, ಸಂವಾದ ಹಾಗೂ ಬಿಂಬ ಬಿಂಬನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂದಿನ ಪೀಳಿಗೆ ಉತ್ತಮ ಚಿಂತನೆ ಗಳನ್ನು ನೀಡುವ ಅವಶ್ಯಕತೆ ಇದೆ. ಇಲ್ಲವಾದರೆ ಯುವಪೀಳಿಗೆ ಮಾನವೀಯ ಮೌಲ್ಯಗಳನ್ನು ಕಳೆದು ಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರ ವಳ್ಳಿ ಮಾತನಾಡಿ, ಸಾಹಿತ್ಯ ಕೃತಿಗಳನ್ನು ಸಿನಿಮಾ ಮಾಡುವ ವೇಳೆಯಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಧ್ವನಿ, ಬೆಳಕು, ಶಬ್ಧ ಎಲ್ಲವೂ ಪೂರಕ ವಾಗಿರಬೇಕು. ಪ್ರೇಕ್ಷಕನಿಗೆ ಅನುಭವ ವಾದರೆ ಸಿನಿಮಾ ಸಫಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಸಿನಿಮಾ ಮಾಧ್ಯಮವು ಮಾರುಕಟ್ಟೆ ಸಂಸ್ಕೃತಿಯಲ್ಲಿ ಕಳೆದುಹೋಗಿದೆ. ಮಾರುಕಟ್ಟೆ ಸಂಸ್ಕೃತಿಯಲ್ಲಿ ವ್ಯಾಪಾರದ ದೃಷ್ಟಿಕೋನದಲ್ಲಿ ವಿವಿಧ ಸಂಗತಿ ಗಳನ್ನು ಬಂಡವಾಳ ಮಾಡಿಕೊಳ್ಳ ಲಾಗುತ್ತಿದೆ. ಸಿನಿಮಾ ನಿರ್ಮಿಸುವಲ್ಲಿ ಸಮಸ್ಯೆ ಇರುವುದಿಲ್ಲ. ಆದರೆ ಅದನ್ನು ಜನರಿಗೆ ತಲುಪಿಸುವ ವ್ಯವಸ್ಥೆಯಲ್ಲಿ ಸಮಸ್ಯೆ ಇರುತ್ತದೆ. ಮೌಲ್ಯಾಧರಿತ ಶಿಕ್ಷಣ ಎಲ್ಲರಿಗೂ ದೊರೆತಾಗ ಕಲಾತ್ಮಕ ಚಿತ್ರಗಳ ಬಗ್ಗೆಯೂ ಆಲೋಚನೆ ಬೆಳೆಯುತ್ತದೆ ಎಂದರು.
ರಂಗಕರ್ಮಿ ಕೆ.ಜೆ.ಕೃಷ್ಣಮೂರ್ತಿ ಮಾತನಾಡಿ, ಗಿರೀಶ್ ಕಾಸರವಳ್ಳಿ ಅವರು ಶ್ರೇಷ್ಠ ನಿರ್ದೇಶಕರಾಗಿದ್ದು, ಮುಖಾಮುಖಿ ಸಂವಾದ ನಡೆಸುವುದು ವಿಶೇಷ ಸಂಗತಿ. ವಿನಯ ಪೂರ್ವ ವ್ಯಕ್ತಿತ್ವ ಹೊಂದಿದ್ದಾರೆ. ಎಲ್ಲರ ಅಭಿಪ್ರಾಯಗಳಿಗೂ ವಿಶೇಷ ಮನ್ನಣೆ ನೀಡುತ್ತಾರೆ ಎಂದು ಹೇಳಿದರು.
ಪ್ರಮುಖರಾದ ಎಚ್.ಯು. ವೈದ್ಯನಾಥ್, ಗೋಪಾಲಕೃಷ್ಣ ಪೈ, ಕೆ.ಚಿದಾನಂದ್, ಜಿ.ವಿಜಯಕುಮಾರ್, ಹರೀಶ್ ಕಾರ್ಣಿಕ್, ಹುಚ್ಚರಾಯಪ್ಪ ಇತರರು ಉಪಸ್ಥಿತರಿದ್ದರು.