ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ. ಅಣೆಕಟ್ಟು, ಜಲಾಶಯ ಹಾಗೂ ಜಲ ವಿದ್ಯುತ್ ಯೋಜನೆ ಗಳಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ನಗರದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಪ್ರಯುಕ್ತ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ವಿಶ್ವೇಶ್ವರಯ್ಯ ನೇತೃತ್ವದಲ್ಲಿ ಮಹತ್ತರ ಯೋಜನೆಗಳು ಜಾರಿಗೊಂಡಿದ್ದವು. ವಿಶ್ವೇಶ್ವರಯ್ಯ ಅವರು ಪಾಲಿಸುತ್ತಿದ್ದ ಸಮಯ ಪಾಲನೆ ಹಾಗೂ ಸರಳ ಜೀವನಶೈಲಿ ಎಲ್ಲರಿಗೂ ಸ್ಫೂರ್ತಿ ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ಅವರ ಕ್ರೀಯಾಶೀಲ ಕಲ್ಪನೆಗಳು ಹಾಗೂ ಸಾಧನೆಗಳು ನಾಡಿನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿತು. ಶೈಕ್ಷಣಿಕ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಅವಿರತ ವಾಗಿ ಶ್ರಮಿಸಿದರು. ಅವರ ಪ್ರಯತ್ನ ದಿಂದ ಹೊಸ ಹೊಸ ಕೈಗಾರಿಕೆಗಳು ಆರಂಭಗೊಂಡವು ಎಂದರು.
ಸಂಘದ ಕಾರ್ಯದರ್ಶಿ ವಸಂತ ಹೋಬಳಿ ದಾರ್ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ಅವರ ಜೀವನ ಶೈಲಿ ಪ್ರತಿಯೊಬ್ಬರಿಗೂ ಸ್ಪೂರ್ತಿ. ಅದು ಯಾವುದೇ ವೃತ್ತಿ ಇರಲಿ, ನೀವು ಮಾಡುವ ಕೆಲಸಗಳನ್ನು ಶ್ರೇಷ್ಠಮಟ್ಟ ದಲ್ಲಿ ನಿರ್ವಹಿಸಬೇಕು ಎಂದಿದ್ದರು. ಅವರ ದೂರದೃಷ್ಟಿ, ಸಮಾಜ ಉಪಯುಕ್ತ ಯೋಜನೆಗಳನ್ನು ಇಂದಿಗೂ ಕಾಣಬಹುದಾಗಿದೆ. ಅವರು ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಅವರ ಪ್ರಾಮಾಣಿಕ, ನಿಸ್ವಾರ್ಥ ಸೇವೆ ನಮಗೆ ದಾರಿದೀಪವಾಗಲಿದೆ ಎಂದರು.
ಪ್ರಮುಖರಾದ ಲಕ್ಷ್ಮೀದೇವಿ ಗೋಪಿನಾಥ್, ರೋಟರಿ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ ಕುಮಾರ್, ರಮೇಶ್ ಹೆಗಡೆ, ಕಿರಣ್‌ಕುಮಾರ್ ಸೇರಿದಂತೆ ಅನೇಕರಿದ್ದರು.