ಭದ್ರಾವತಿ ಪೋಲೀಸರ ಭರ್ಜರಿ ಕಾರ್ಯಾಚರಣೆ: 20 ಲಕ್ಷ ಮೌಲ್ಯದ ಚಿನ್ನಾಭರಣ ವಶ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ :ನ್ಯೂಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ ನ.1ರಂದು ಮಧ್ಯಾಹ್ನ ಕೆ.ಎಸ್‌. ಆರ್.ಟಿಸಿ ಬಸ್ ನಿಲ್ದಾಣದಲ್ಲಿ ಸುಮಾರು 20 ಲಕ್ಷ ರೂ. ಮೌಲ್ಯದ 276.75 ಗ್ರಾಂ ತೂಕದ ಚಿನ್ನಾಭರಣಗಳಿದ್ದ ಚೀಲ ಕಳ್ಳತನ ವಾಗಿದ್ದು, ಆರೋಪಿಯನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಕಾಶಿಪುರ ನಿವಾಸಿ ಪ್ರಭಾವತಿ (43) ತಮ್ಮ ಮನೆಗೆ ಬಂಗಾರದ ಆಭರಣ ಗಳಿದ್ದ ಕಿಟ್ ಬ್ಯಾಗ್‌ ಹಾಗೂ ಇತರ ವಸ್ತುಗಳಿದ್ದ ಬ್ಯಾಗ್ ಗಳನ್ನು ತೆಗೆದುಕೊಂಡು ಭದ್ರಾವತಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಬಸ್ ನಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು.

ಶಿವಮೊಗ್ಗದಲ್ಲಿ ಬಸ್ ಇಳಿಯುವಾಗ ಬಂಗಾರದ ಆಭರಣಗಳಿದ್ದ ಕಿಟ್ ಬ್ಯಾಗ್ ನಾಪತ್ತೆಯಾಗಿತ್ತು. ಸದರಿ ಬ್ಯಾಗ್ ನಲ್ಲಿ 20 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ಎರಡು ರೇಷ್ಮೆ ಸೀರೆಗಳು ಕಳುವಾಗಿದ್ದು ಈ ಬಗ್ಗೆ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಭದ್ರಾವತಿ ಪೊಲೀಸ್ ವೃತ್ತ ನಿರೀಕ್ಷಕ ಶೈಲಕುಮಾ‌ರ್, ಪಿಎಸ್‌ಐ ಟಿ. ರಮೇಶ್, ಎಎಸ್ ಐ ಮಂಜಪ್ಪ, ಸಿಬ್ಬಂದಿಗಳಾದ ನವೀನ್, ಹಾಲಪ್ಪ, ಮಧುಪ್ರಸಾದ್, ಮೌನೇಶ್, ಪ್ರಸನ್ನ, ದಿವ್ಯಶ್ರೀ ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. 

ನ.3ರಂದು ಈ ತಂಡ ಪ್ರಕರಣದ ಆರೋಪಿ ಸೀಗೆಬಾಗಿ ನಿವಾಸಿ ಆಟೆಂಡರ್ ಕೆಲಸ ಮಾಡುವ ಕಮಲಮ್ಮ(48) ಬಂಧಿಸಲಾಗಿದೆ ಎಂದರು.

ಹೊಸ ಮನೆ ಠಾಣೆ :

ಭದ್ರಾವತಿ ಹೊಸ ಮನೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮನೆಗಳತನ ಪ್ರಕರಣದ ಆರೋಪಿ ಯನ್ನು ಬಂಧಿಸಿ, ಸುಮಾರು 16.50 ಲಕ್ಷ ರೂ. ಮೌಲ್ಯದ 259 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಹೊಸ ಮನೆ ಭದ್ರಾವತಿ ನಿವಾಸಿ, ಜಿ ಆ‌ರ್ ವಿನೋದ್ ಆಗಸ್ಟ್ 15ರಂದು ಊರಿಗೆ ಹೋಗಿದ್ದು, ಆಗಸ್ಟ್ 21ರಂದು ಮನೆಗೆ ಮರಳಿ ಬಂದು ನೋಡಿದಾಗ ಬೀರುವಿನಲ್ಲಿಟ್ಟಿದ್ದ 20 ಲಕ್ಷ ರೂಪಾಯಿ ಮೌಲ್ಯದ 400 ಗ್ರಾಂ ಚಿನ್ನಾಭರಣಗಳು ಕಳುವಾಗಿರುವುದು ಗೊತ್ತಾಗಿತ್ತು. ಅವರು ಭದ್ರಾವತಿಯ ಹೊಸ ಮನೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖಾ ತಂಡ, ನ: 3 ರಂದು ಪ್ರಕರಣದ ಆರೋಪಿಯಾದ, ಎಸ್ ಎಸ್ ನಿತಿನ್ (27) ಐಟಿ ಉದ್ಯೋಗಿ ನಿವಾಸಿಯನ್ನು ಬಂಧಿಸಿ, ಆರೋಪಿತನಿಂದ 16 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿ ಚಿನ್ನಾಭರಣಗಳನ್ನು ಕರಗಿಸಿ, ಚಿನ್ನದ ಗಟ್ಟಿಗಳನ್ನಾಗಿ ಮಾಡಿಕೊಂಡಿದ್ದ ಒಟ್ಟು, 259 ಗ್ರಾಂ ತೂಕದ ಆರು ಬಂಗಾರದ ಗಟ್ಟಿಗಳು ಮತ್ತು ಬಂಗಾರದ ಕೈ ಕಡಗವನ್ನು ವಶಕ್ಕೆ ಪಡೆಯಲಾಗಿದೆ.

ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಶಿಸಿ ಅಭಿನಂದಿಸ ಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾ‌ರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಅನಿಲ್ ಕುಮಾರ್, ಎ.ಜಿ. ಕಾರ್ಯಪ್ಪ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು