ವಿಜಯ ಸಂಘರ್ಷ ನ್ಯೂಸ್
ಕೆ.ಆರ್.ಪೇಟೆ:ಪ್ರತಿಯೊಬ್ಬ ಕನ್ನಡಿಗನು ನಾಡು, ನುಡಿ ಬಗ್ಗೆ ಅಭಿಮಾನ ಹೊಂದಿದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು.
ಪಟ್ಟಣದ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾoಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕರ್ನಾಟಕ ಎಂದು ಹೆಸರು ಬರಲು ಪ್ರಮುಖವಾಗಿ ಶ್ರಮಿಸಿದ ಆಲೂರು ವೆಂಕಟರಾಯರು ಸೇರಿದಂತೆ ಅನೇಕ ಮಹನೀಯರನ್ನ ಈ ಸಂದರ್ಭದಲ್ಲಿ ನೆನೆಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ನಮ್ಮ ಕರ್ನಾಟಕ ಪ್ರಾಕೃತಿಕ, ಐತಿಹಾಸಿಕ, ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೆ ಆದ ಹೆಗ್ಗುರುತನ್ನು ಹೊಂದಿದೆ.ಕರ್ನಾಟಕ ರಾಜ್ಯ ರೂಪುಗೊಂಡ ಮೇಲೆ ಕನ್ನಡ ನಾಡು- ನುಡಿಗಾಗಿ ಹಲವು ಹೋರಾಟಗಳು ನಡೆದಿವೆ. ಇದರಲ್ಲಿ 1980 ರ ದಶಕದಲ್ಲಿ ತ್ರಿಭಾಷಾ ಸೂತ್ರದಡಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯನ್ನಾಗಿ ಪರಿಗಣಿಸಬೇಕೆಂದು ಮತ್ತು ಕನ್ನಡದ ನಾಡು ನುಡಿಗೆ ಭದ್ರ ಬುನಾದಿ ಹಾಕಲು ಗೋಕಾಕ್ ಚಳುವಳಿ ನಾಂದಿ ಹಾಡಿತ್ತು. ಚಳುವಳಿಯಲ್ಲಿ ವಿ.ಕೃ.ಗೋಕಾಕ್, ಜಿ. ನಾರಾಯಣ್ ಕುಮಾರ್ ಮತ್ತು ಪ್ರೋ. ಚಂದ್ರಶೇಖರ್ ರವರುಗಳು ಪ್ರಮುಖ ಪಾತ್ರ ವಹಿಸಿದರು.
ಗೋಕಾಕ್ ಚಳುವಳಿಗೆ ಕನ್ನಡ ಭೂಮಿ ಮತ್ತು ಭಾಷೆ ಸಲುವಾಗಿ ಯಾವುದೇ ತ್ಯಾಗಕ್ಕೆ ಸಿದ್ದ ಎಂದು ಕನ್ನಡ ಮೇರು ನಟ ಡಾ. ರಾಜ್ ಕುಮಾರ್ ರವರು ಹೋರಾಟಕ್ಕೆ ದೊಡ್ಡ ಮಟ್ಟದಲ್ಲಿ ದುಮುಕಿದರು.ಕನ್ನಡ ನಾಡಿನ ರಾಷ್ಟ್ರ ಕವಿ ಕುವೆಂಪು, ದಾ.ರಾ.ಬೇಂದ್ರೆ, ಶಿವರಾಮ ಕಾರಂತರು ಸೇರಿದಂತೆ ಹಲವು ಕವಿಗಳು ಮತ್ತು ಸಾಹಿತಿಗಳು ಕನ್ನಡದ ಬೆಳೆವಣಿಗೆಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ.ಇವರುಗಳ ಜೊತೆಗೆ ಕನ್ನಡ ನಾಡಿನ ಶಾಂತವೇರಿ ಗೋಪಾಲಗೌಡ ರವರು ಸೇರಿದಂತೆ ಹಲವು ನಾಯಕರು ಕನ್ನಡಿಗರ ಮತ್ತು ಬಡವರು-ಕಾರ್ಮಿಕರ ಪರವಾಗಿ ಹೋರಾಟ ಮಾಡಿದ್ದರಿಂದ ನಮ್ಮ ಕರ್ನಾಟಕ ರಾಜ್ಯವು ದೇಶದಲ್ಲೇ ಬಲಿಷ್ಠವಾಗಿದೆ.ಇದನ್ನು ಉಳಿಸಿ ಮತ್ತು ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ.ಮುಂದಿನ ದಿನಗಳಲ್ಲಿ ಕನ್ನಡ ಮತ್ತು ಕರ್ನಾಟಕದ ಹೆಮ್ಮೆಯ ಹೆಜ್ಜೆ ಗುರುತನ್ನು ನಮ್ಮ ಮುಂದಿನ ಪೀಳಿಗೆಯನ್ನು ತಿಳಿಸಲು ಸಕ್ರಿಯರಾಗಬೇಕೆಂದು ಶಾಸಕ ಹೆಚ್.ಟಿ ಮಂಜು ಹೇಳಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸಿಲ್ದಾರ್ ಡಾ: ಎಸ್.ಯು ಅಶೋಕ್ ದೇಶದಲ್ಲಿ ಕರ್ನಾಟಕ ರಾಜ್ಯ ಹಲವು ವೈವಿಧ್ಯತೆಗಳ ತವರೂರಾಗಿದ್ದು.ಇಂತಹ ನಾಡಿನಲ್ಲಿ ಜನಸಿದ ನಾವುಗಳು ಧನ್ಯರಾಗಿದ್ದು. ಪರಭಾಷೆ ಮೋಹಕ್ಕೆ ಒಳಗಾಗದೆ ನಮ್ಮ ಭಾಷೆ ಉಳಿವಿಗೆ ಮುಂದಾಗಬೇಕು ಎಂದರು.
ಕೆಪಿಎಸ್ ಶಾಲೆಯಿಂದ ಕ್ರೀಡಾಂಗಣದವರೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮಾತೆ ಭುವನೇಶ್ವರಿಯ ಭಾವಚಿತ್ರವನ್ನು ಮೆರವಣಿಗೆ ಮೂಲಕ ಕರೆತರಲಾಯಿತು.
ತಾಲೂಕಿನ ವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.ನಂತರ ನಾನಾ ಶಾಲೆಯ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆದವು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಸುಷ್ಮಾ, ಪೊಲೀಸ್ ಇನ್ಸ್ಪೆಕ್ಟರ್ ಸುಮಾರಾಣಿ, ಪುರಸಭೆ ಅಧ್ಯಕ್ಷೆ ಪಂಕಜಾ, ಉಪಾಧ್ಯಕ್ಷೆ ಸೌಭಾಗ್ಯ, ಸದಸ್ಯೆಯರಾದ ಇಂದ್ರಾಣಿ, ಸುಗುಣಾ, ಕಲ್ಪನಾ, ಗಿರೀಶ್, ಶಾಮಿಯಾನ ತಿಮ್ಮೇಗೌಡ,
ಬಿಇಓ ಚಂದ್ರಶೇಖರ್, ಮುಖ್ಯಧಿಕಾರಿ ನಟರಾಜ್, ಕರವೇ ಜಿಲ್ಲಾ ಅಧ್ಯಕ್ಷ ವೇಣು, ಜಯ ಕರ್ನಾಟಕ ಸಂಘದ ಅಧ್ಯಕ್ಷ ಸೋಮಶೇಖರ್, ಕರವೇ ತಾ. ಅಧ್ಯಕ್ಷ ಟೆಂಪೋ ಶ್ರೀನಿವಾಸ್, ಚಿಕ್ಕೋನಹಳ್ಳಿ ಚೇತನ್ ಕುಮಾರ್, ಸಾಸಲು ಗುರುಮೂರ್ತಿ, ಸಿಡಿಪಿಓ ಅರುಣ್ ಕುಮಾರ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಉಪಸ್ಥಿತರು ಭಾಗವಹಿಸಿದ್ದರು.
(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ
ಕೆ ಆರ್ ಪೇಟೆ)
Tags:
ಕೆ ಆರ್ ಪೇಟೆ ವರದಿ