ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಬದುಕು ನೆಮ್ಮದಿಯಾಗಿ ಸಾಗಿಸಲು ಮೌಲ್ಯಗಳು ಹಾಗೂ ಸಂಸ್ಕಾರ ತುಂಬಾ ಅಗತ್ಯವಾಗಿರುತ್ತದೆ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ನಗರದ ಗೋಪಾಳದ ಡಿ.ಎಂ. ಶಂಕರಪ್ಪ ನಿವಾಸದಲ್ಲಿ ಆಯೋಜಿಸಿದ್ದ ಚಿಂತನಾ ಕಾರ್ತಿಕದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಜನರಿಗೆ ಜ್ಞಾನದ ಬುತ್ತಿ ನೀಡುವುದರ ಜತೆಗೆ ಮನೆಮನಗಳನ್ನು ಬೆಳಗುತ್ತದೆ. ಜ್ಞಾನದಾಸೋಹದ ಚಿಂತನಾ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯಲು ಇಚ್ಛಾಶಕ್ತಿ ಬೇಕಿದೆ ಎಂದು ತಿಳಿಸಿದರು.
ಹದಿನೆಂಟು ವರ್ಷಗಳಿಂದ ಭಕ್ತರ ನೆರವಿನಿಂದ ಚಿಂತನ ಕಾರ್ತಿಕ ಯಶಸ್ವಿಯಾಗಿ ನಡೆಯುತ್ತಿದ್ದು, ಜನಮಾನಸ ತಲುಪುವ ಜತೆಯಲ್ಲಿ ಶರಣರ ಚಿಂತನೆ, ಸಾಧಕರು, ಸಾಧುಸಂತರ ವಿಚಾರಗಳು ಅನಾವರಣ ಗೊಳ್ಳುತ್ತಿವೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್, ಬಸವಣ್ಣ ಅವರ ವಚನಗಳು ಇಂದಿಗೂ ಪ್ರಸ್ತುತ. ಬಸವಣ್ಣ ಅವರ ವಚನಗಳು ಸಮಾಜದ ವಿವಿಧ ಸಂಗತಿಗಳ ಬಗ್ಗೆ ಪ್ರಸ್ತಾಪಿಸಿದ್ದವು. ಪ್ರತಿ ವಚನಗಳಲ್ಲಿಯೂ ಬದುಕಿಗೆ ಅವಶ್ಯವಿರುವ ಸಂಗತಿಗಳನ್ನು ತಿಳಿಸುತ್ತದೆ ಎಂದು ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಯುವಪೀಳಿಗೆಯಲ್ಲಿ ಧರ್ಮ, ಸಂಸ್ಕೃತಿಯ ಅರಿವು ಮೂಡಿಸುವ ಜತೆಯಲ್ಲಿ ಧಾರ್ಮಿಕ ಮನೋಭಾವನೆ ಬೆಳೆಸಬೇಕು. ಮಕ್ಕಳಲ್ಲಿ ಸಕರಾತ್ಮಕ ಭಾವನೆ ಬೆಳೆಸಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಚಿಂತನ ಕಾರ್ತಿಕದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಜೀವನಕ್ಕೆ ಅಮೂಲ್ಯ ವಾಗಿ ಬೇಕಿರುವ ಸಂಸ್ಕಾರವನ್ನು ಚಿಂತನ ಕಾರ್ತಿಕದಂತಹ ಕಾರ್ಯಕ್ರಮಗಳು ಕಲಿಸುತ್ತವೆ. ನಾವು ಮಾಡಿದ ಸಮಾಜಮುಖಿ ಸೇವೆ ದಾನ, ಧರ್ಮ ನಮ್ಮನ್ನು ಕಾಪಾಡುತ್ತದೆ. ಪರಿಸರ ಉಳಿಸಿ ಬೆಳೆಸುವ ಜತೆಯಲ್ಲಿ ಆರೋಗ್ಯ ಜೀವನ ನಡೆಸಬೇಕು ಎಂದರು.
ಚನ್ನಗಿರಿ ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ಡಿ.ಎಂ.ಶಂಕರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ, ಕಮಲಮ್ಮ, ಉಪಸ್ಥಿತರಿದ್ದರು.
Tags:
ಶಿವಮೊಗ್ಗ ವರದಿ