ಶ್ರೀ ವೃಷಭಂದ್ರನಾಥ ಅಪ್ಪನವರ ಜೋಡು ಪಲ್ಲಕ್ಕಿ ಉತ್ಸವ

ವಿಜಯ ಸಂಘರ್ಷ ನ್ಯೂಸ್ 
ಕೊಡೇಕಲ್: ಕಾಲಜ್ಞಾನಿ ಕೊಡೇಕಲ್ ಬಸವಣ್ಣನವರ ಜೋಡು ಪಲ್ಲಕ್ಕಿಯ ಮಹೋತ್ಸವವು ಭಾನುವಾರ ಭಕ್ತ ಸಾಗರ ಜಯಘೋಷಗಳೊಂದಿಗೆ ಭಕ್ತಿ-ಸಂಭ್ರಮ ದಿಂದ ಜರುಗಿತು.

ಸ್ಥಳೀಯ ಬಸವಪೀಠದ 15ನೇ ಪೀಠಾಧಿಪತಿ ಶ್ರೀ ವೃಷಭಂದ್ರನಾಥ ಅಪ್ಪನವರ ನೇತೃತ್ವ ದಲ್ಲಿ ಹುಣ್ಣಿಮೆ ದಿನ ಜೋಡು ಪಲ್ಲಕ್ಕಿಗಳಿಗೆ ಚಿನ್ನ ಹಾಗೂ ಬೆಳ್ಳಿಯ ಕಳಸಾರೋಹಣ, ಅಷ್ಟವಿಧಾರ್ಚನೆಯ ಕಾಲಜ್ಞಾನ ವಚನಗಳ ಮಾಲಿಕೆಯಲ್ಲಿ ಪೂಜಾಧಿ ಕೈಂಕರ್ಯಗಳು ಜರುಗಿದವು 

ಬೆಳಗ್ಗೆ ಬಸವಣ್ಣನವರ ಐಕ್ಯ ಸ್ಥಳ (ಊರಾನ ಗುಡಿ)ಯ ರಾಜಗಟ್ಟೆಯ ಮೇಲೆ ಅಲಂಕಾರ ಭೂಷಣವಾಗಿ ಕೂರಿಸಿದ್ದ ಜೋಡು ಪಲ್ಲಕ್ಕಿ ಗಳಿಗೆ ಶ್ರೀ ವೃಷಭಂದ್ರನಾಥ ಅಪ್ಪನವರು ಹಾಗೂ ಅರಸು ಮನೆತನದ ರಾಜಾ ಜೀತೇಂದ್ರನಾಯಕ ಹಾಗೂ ರಾಜಾ ವೆಂಕಟಪ್ಪನಾಯಕ ಜಹಾಗೀರದಾರ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.

ನೆರೆದಿದ್ದ ಭಕ್ತರು ಕೊಡೇಕಲ್ ಚೆನ್ನ ಬಸವಣ್ಣ ಮಹಾರಾಜಕೀ ಜೈ ...,ಭಕ್ತಿಯ ಜಯ ಘೋಷಣೆಯೊಂದಿಗೆ ಜೋಡು ಪಲ್ಲಕ್ಕಿ ಉತ್ಸವ ಸಾಗುತ್ತಿದ್ದಂತೆ, ದಾರಿಯುದ್ದಕ್ಕೂ ಭಕ್ತರು ಹೂ, ಉತ್ತತ್ತಿ, ಬಾಳೆಹಣ್ಣು, ಪನಿವಾರ, ಬತ್ತಾಸು, ಕಲ್ಲು ಸಕ್ಕರೆ ಎಸೆದು ಭಕ್ತಿ ಸಮರ್ಪಿಸಿದರು.

 ಬಸವಣ್ಣನವರು ಕಾಲಜ್ಞಾನ ವಚನ ಬರೆದ ಸ್ಥಳ ( ಪ್ಯಾಟಿಗುಡಿ)ದವರೆಗೆ ಸಾಗಿ ಬಾರಾ ಬರೂತಿ ಸಂಪ್ರದಾಯದಂತೆ ಪಟ್ಟಣದ ಹರಗುರು ಚರಮೂರ್ತಿಗಳ ಸನ್ನಿಧಾನದಲ್ಲಿ ಮುಸ್ಲಿಂ ಹಣಗಿ ಮನೆತನದ ವ್ಯಕ್ತಿಯೋರ್ವರು ಮೊಹಮದ್ ಪೈಗಂಬರ್‌ರ ವಾಣಿಯನ್ನು ದೀನ್ ಜಗಾಯಿಸಿದ ನಂತರ ದೂಳಗಾಯಿ ಒಡೆಯಲಾಯಿತು. 

ಗ್ರಾಮದ ಧಣಿ, ನಾಡಗೇರ, ಕುಲಕರ್ಣಿ, ಮಾಲಿಪಾಟೀಲ್, ಪೊಲೀಸ್‌ಪಾಟೀಲ್, ನೇಕಾರ ಹೀಗೆ ಪ್ರಮುಖ ಮನೆತನಗಳ ಹಿರಿಯರು ಧೂಳಗಾಯಿ ಒಡೆಯುವ ಸಂದರ್ಭದಲ್ಲಿ ಉಪಸ್ಥಿತರಿದ್ದು ಜಾತ್ರಾ ಮಹೋತ್ಸವಕ್ಕೆ ಮೆರಗು ನೀಡಿದರು. ಪಲ್ಲಕ್ಕಿ ಉತ್ಸವದ ಮೆರವಣೆಗೆ ಸಾಗುವ ದಾರಿಯುದ್ದಕ್ಕೂ ಬಸವ ಗುರು ಪರಂಪರೆಯ ಗುರುಗಳು, ಕೈಯಲ್ಲಿ ಕಾಲಜ್ಞಾನ ವಚನ ಗ್ರಂಥ ಮಾಲಿಕೆ ಹಿಡಿದು ಪಠಿಸುತ್ತಾ ಹಿಮ್ಮುಖವಾಗಿ ನಡೆದು ಸಾಗುತ್ತಿದ್ದರು. ನಂತರ ಪ್ಯಾಟಿ ಗುಡಿಯಲ್ಲಿರುವ ಹಿರಿಯ ಒಡೆಯ (ಹಿರೋಡೆ ದೇವರು) ಮುಂದೆ ಪ್ರೇತವನ್ನು ನಿಗ್ರಹಿಸಿದ ಕಾರ್ಯದಲ್ಲಿ ಅರ್ಚಕರು ಪಾಲ್ಗೊಂಡಿದ್ದರು.

 ಯಾದಗೇರಿಯ ಸುತ್ತಮುತ್ತಲಿನ ಜಿಲ್ಲೆಯ ಹಾಗೂ ವಿವಿಧ ತಾಲೂಕು ಗ್ರಾಮಗಳಿಂದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಸಮೀಪದ ನಾರಾಯಣಪುರ , ಜೋಕಾನಂದಭಾವಿ , ಮಾರನಾಳ ತಾಂಡಾ , ಹಗರಟಗಿ, ಎಣ್ಣಿವಡಗೇರಿ, ಬಸಾಪುರ, ಕೋಟೆಗುಡ್ಡ, ಅಮ್ಮಾಪುರ (ಎಸ್.ಕೆ) ಹುಣಸಗಿ, ಮತ್ತಿತರ ಭಕ್ತರು ಕಾಲಜ್ಞಾನಿ ಬಸವೇಶ್ವರನ ದರ್ಶನಕ್ಕೆ ಆಗಮಿಸಿದ್ದರು.

ಮಾಜಿ ಸಚಿವ ನರಸಿಂಹನಾಯಕ, ಹಣಮಂತನಾಯಕ (ಬಬಲುಗೌಡ), ಸಂಗಪ್ಪ ರಾಮನಗೌಡರ, ತಶೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ , ಉಪ ತಹಸೀಲ್ದಾರ್ ಕಲ್ಲಪ್ಪಗೌಡ ಜಂಜಿಗಡ್ಡಿ, ವಿ.ಎಸ್.ಹಾವೇರಿ. ಶಾಮಸುಂದರ ಜೋಶಿ, ವಿ.ವಿ.ಮಹಲಿನ ಮಠ, ರಂಗನಾಥ ದೊರೆ, ಹುಣಸಗಿ ತಾಲ್ಲೂಕಿನ ಎಲ್ಲಾ ಕಂದಾಯ ನಿರೀಕ್ಷಕ ಸರ್ವ ಧರ್ಮದ ಜನರು ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು. 

ವರದಿ : ಶಿವು ರಾಠೋಡ್ ಯಾದಗಿರಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು