ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಹೆಚ್ಚು ಗಿಡಗಳನ್ನು ನೆಟ್ಟು, ವೈಜ್ಞಾನಿಕವಾಗಿ ತ್ಯಾಜ್ಯವನ್ನು ಬೇರ್ಪಡಿಸಿ ಮತ್ತು ವಿಲೇವಾರಿ ಮಾಡುವ ಮೂಲಕ ನಮ್ಮ ಪರಿಸರ ವನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ ಅಧಿಕಾರಿ ವಿ.ರಮೇಶ್ ಕರೆನೀಡಿದರು.
ನಗರದ ವಿಐಎಸ್ ಎಲ್ ಕಾರ್ಖಾನೆಯ ಭದ್ರಾ ಅತಿಥಿಗೃಹದಲ್ಲಿ ಬುಧವಾರ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರದ ಪರಿಸರ ಮಾಸಾಚರಣೆ- 2024ರ ಸಮಾರೋಪ ಸಮಾರಂಭ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.
ವಿಐಎಸ್‌ಎಲ್‌ನ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ, ಪ್ರತಿಯೊಬ್ಬ ಭಾರತೀಯನೂ ಒಂದು ಮರವನ್ನು ನೆಟ್ಟು ರಕ್ಷಿಸುವ ಪ್ರತಿಜ್ಞೆ ಮಾಡಿದರೆ 140 ಕೋಟಿ ಮರಗಳನ್ನು ನೆಡಬಹುದು. ಮಾಲೀನ್ಯವನ್ನು ತೊಡೆದುಹಾಕಲು ಮತ್ತು ಪರಿಸರ ಸಮಸ್ಯೆ ಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ ಎಂದರು.
ಕಾರ್ಖಾನೆಯ ಮುಖ್ಯ ಮಹಾ ಪ್ರಬಂಧಕ (ಸ್ಥಾವರ)ಕೆ.ಎಸ್.ಸುರೇಶ್ ಮಾತನಾಡಿ, ನಾವು ಹೆಚ್ಚು ಮರ ಗಳನ್ನು ನೆಡಬೇಕು, ಸುಸ್ಥಿರ ಅಭಿವೃದ್ಧಿ ಗಾಗಿ ಸೌರ, ಪವನ ಮುಂತಾದ ನವೀಕರಿಸಬಹುದಾದ ಇಂಧನ ಮೂಲಗಳನ್ನು ಅನ್ವೇಷಿಸಬೇಕು ಎಂದರು.
ಪರಿಸರದ ಬಗ್ಗೆ ಕಾಳಜಿಯನ್ನು ಮೂಡಿಸುವ ಉದ್ದೇಶದಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಬರೆಯುವುದು, ಪರಿಸರ ರಸಪ್ರಶ್ನೆ ಮತ್ತು ಘೋಷವಾಕ್ಯ ಬರೆಯುವ ಸ್ಪರ್ಧೆಗಳನ್ನ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಲ್ಲಾ ವಿಜೇತರಿಗೆ ಸಸಿಗಳನ್ನು ವಿತರಿಸಲಾಯಿತು. ಪರಿಸರ ಮತ್ತು ಪ್ರಕೃತಿಯ ಕುರಿತಾದ ಮೊದಲ ದಿನದ ಕವರ್‌ಗಳು ಮತ್ತು ಮಿನಿಯೇಚರ್ ಸ್ಟ್ಯಾಂಪ್ ಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಮಹಾಪ್ರಬಂಧಕ (ಪರಿಸರ ನಿರ್ವಹಣೆ ವಿಭಾಗ ಮತ್ತು ಸಿವಿಲ್ ಇಂಜಿನಿಯ ರಿoಗ್) ಮುತ್ತಣ್ಣ ಸುಬ್ಬರಾವ್, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ, ಉಪ ಪರಿಸರ ಅಧಿಕಾರಿ ಕೆ.ಶಿಲ್ಪಾ ಇತರರಿದ್ದರು.
ತ್ರಿವೇಣಿ ಮತ್ತು ಮಂಜುಶ್ರೀ ಪ್ರಕೃತಿ ಕುರಿತಾದ ಹಾಡು ಮತ್ತು ಪ್ರಾರ್ಥನಾ ಗೀತೆ ಹಾಡಿದರು. ಮುತ್ತಣ್ಣ ಸುಬ್ಬರಾವ್ ಸ್ವಾಗತಿಸಿ,ವಿಕಾಸ್ ಬಸೇರ್, ನಿರೂಪಿಸಿ, ಜಿ.ಹೆಚ್. ನಂದನ, ವಂದಿಸಿದರು.