ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಎನ್‌ಎಸ್‌ಎಸ್ ಸಹಾಯಕ: ಡಾ.ಪರಿಸರ ನಾಗರಾಜ್

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕರ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವಲ್ಲಿ ಎನ್‌ಎಸ್‌ಎಸ್ ಪಾತ್ರ ಬಹಳ ಮುಖ್ಯವಾದದ್ದು ಎಂದು ಕುವೆಂಪು ವಿವಿ ನಿಕಟ ಪೂರ್ವ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಪರಿಸರ ನಾಗರಾಜ್ ಹೇಳಿದರು.

ಶನಿವಾರ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎನ್‌ಎಸ್‌ಎಸ್ ಸ್ವಯಂ ಸೇವಕರಿಗೆ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎನ್‌ಎಸ್‌ಎಸ್ ಬದುಕು ಕಟ್ಟಿಕೊಡುವಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಸಹಾಯಕವಾಗುತ್ತದೆ. ಎನ್‌ಎಸ್‌ಎಸ್ ಸೇರಿದ ಮೇಲೆ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವಕಾಶಗಳು ಕೂಡ ಲಭಿಸುತ್ತವೆ. ಆಗಾಗಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಸಮಾಜ ದಲ್ಲಿ ಗಣ್ಯ ವ್ಯಕ್ತಿಗಳಾಗಬೇಕು ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್ ಮಾತನಾಡಿ, ಎನ್‌ಎಸ್‌ಎಸ್ ಧೈರ್ಯ, ಆತ್ಮಬಲವನ್ನು ಹೆಚ್ಚಿಸುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶದವರಿಗೆ ಹೊಸ ಲೋಕವನ್ನೇ ಸೃಷ್ಟಿ ಮಾಡುತ್ತದೆ. ಸಾಮರಸ್ಯ, ಸೇವಾ ಭಾವನೆಯನ್ನು ಕಲಿಸುತ್ತದೆ ಎಂದರು.

ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಮಾತನಾಡಿ, ಈಗಾಗಲೇ ವಿದ್ಯಾರ್ಥಿಗಳಲ್ಲಿ ಎನ್‌ಎಸ್‌ಎಸ್ ಗುಣಗಳು ಇದ್ದೇ ಇರುತ್ತವೆ. ಅವುಗಳನ್ನು ಮತ್ತಷ್ಟು ವಿಸ್ತರಿಸಕೊಳ್ಳಬೇಕು ಅಷ್ಟೇ ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಜೋತುಬೀಳದೆ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ಜಗತ್ತು ತಲ್ಲಣಗೊಳ್ಳುತ್ತಿ ರುವ ವಿಷಾಧದ ಈ ಹೊತ್ತಿನಲ್ಲಿ ವಿದ್ಯಾರ್ಥಿ ಗಳಿಗೆ ಎನ್‌ಎಸ್‌ಎಸ್ ಎಂಬುವುದು ಜೀವ ಜಲ ನೀಡುತ್ತದೆ. ಲವಲವಿಕೆ ಮತ್ತು ಜೀವನ ಪ್ರೀತಿಯನ್ನು ಬೆಳೆಸಿಕೊಳ್ಳಿ ಎಂದರು.

ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಕೆ.ಎಂ. ನಾಗರಾಜ್ ಮಾತನಾಡಿ, ಎನ್‌ಎಸ್‌ಎಸ್‌ ನಿಂದ ಸಾವಿರಾರು ವಿದ್ಯಾರ್ಥಿಗಳ ಬದುಕು ಹಸನಾಗಿದೆ. ಇದು ಉದ್ಯೋಗ ಪಡೆದು ಕೊಳ್ಳುವಲ್ಲಿಯೂ ಸಹಾಯಕವಾಗುತ್ತದೆ. ಕೌಶಲ್ಯವನ್ನು ಕಲಿಸುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ನೀವು ಎನ್‌ಎಸ್‌ಎಸ್ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಿ. ಜೊತೆಗೆ ಓದನ್ನು ಕೂಡ ಮರೆಯಬೇಡಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಪ್ರೊ. ಮಮತಾ ಪಿ.ಆರ್. ಮಾತನಾಡಿ, ಎನ್‌ಎಸ್‌ಎಸ್ ಸಂಸ್ಕಾರ ಕಲಿಸುತ್ತದೆ. ಪೋಷಕರ ಶ್ರಮ ವ್ಯರ್ಥವಾಗದಂತೆ ಚೆನ್ನಾಗಿ ಅಭ್ಯಾಸ ಮಾಡಿ, ಶ್ರದ್ಧೆಯಿರಲಿ. ನಮ್ಮ ಕಾಲೇಜು ಆಡಳಿತ ಮಂಡಳಿ ಪಠ್ಯೇತರ ಚಟುವಟಿಕೆಗಳಿಗೆ ಸಾಕಷ್ಟು ಪ್ರೋತ್ಸಾಹ ಕೊಡುತ್ತದೆ. ಈ ಕಾಲೇಜಿನಲ್ಲಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿರುವುದಕ್ಕೆ ಎನ್‌ಎಸ್‌ಎಸ್ ಕೂಡ ಕಾರಣ ಎಂದರು.ಅನುಜ್ಞಾ ಸ್ವಾಗತಿಸಿ, ಜ್ಞಾನಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು