ಕುಂಬಾರ ವೃತ್ತಿ ಉಳಿಸುವುದು ಅವಶ್ಯಕ: ಎಸ್.ಮಣಿ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ಕುಂಬಾರ ವೃತ್ತಿಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಕುಂಬಾರ ವೃತ್ತಿ ಉಳಿಸಬೇಕು. ಸಮುದಾಯದವರಲ್ಲಿ ಜಾಗೃತಿ ಮೂಡಿಸಿ ಸರ್ಕಾರದ ಗಮನ ಸೆಳೆಯಬೇಕಿದೆ ಎಂದು ಶಿವಮೊಗ್ಗ ತಾಲೂಕು ಕುಂಬಾರ ಸಂಘದ ಅಧ್ಯಕ್ಷ ಎಸ್.ಮಣಿ ಹೇಳಿದರು.

ಶಿವಮೊಗ್ಗ ಸೆಂಟ್ರಲ್ ರೋಟರಿ ಭವನದ ಸಭಾಂಗಣದಲ್ಲಿ ಶಿವಮೊಗ್ಗ ತಾಲೂಕು ಕುಂಬಾರ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು 14ನೇ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಮಣ್ಣಿನಿಂದ ಮಾಡಿದ ವಸ್ತುಗಳು ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ. ಆದರೂ ಜನತೆ ಕಾಳಜಿ ವಹಿಸುತ್ತಿಲ್ಲ ಎಂದರು.

ಇಂದಿನ ಜಾಗತೀಕರಣ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚುತ್ತಿದೆ. ಇವುಗಳು ಪರಿಸರಕ್ಕೆ ಮಾರಕ ಎಂಬುದು ತಿಳಿದಿದ್ದರೂ ಬಹುಪಾಲು ಜನತೆ ಯಥೇಚ್ಛವಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.


ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ಹಿರಿಯ ವ್ಯವಸ್ಥಾಪಕ ಓಬಯ್ಯ ಮಾತನಾಡಿ, ತಾಲೂಕು ಮಟ್ಟದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ, ಎಸ್.ಎಸ್.ಎಲ್.ಸಿ. ಮತ್ತು ಪಿಯು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಈ ರೀತಿ ಕಾರ್ಯಕ್ರಮ ಹೆಚ್ಚು ಹೆಚ್ಚು ಮಾಡಬೇಕು. ಕುಂಬಾರ ವೃತ್ತಿಗೆ ನೆರವು ಪ್ರೋತ್ಸಾಹ ಅತ್ಯಗತ್ಯ ಇದೆ ಎಂದು ತಿಳಿಸಿದರು.

ತಾಲೂಕು ಕುಂಬಾರ ಸಂಘದ ನಿರ್ದೇಶಕ ಈಶ್ವರ್.ಬಿ.ವಿ ಮಾತನಾಡಿ, ಕುಂಬಾರರು ಮಣ್ಣಿನ ಮಾಂತ್ರಿಕರು. ಮಾನವನ ಅತ್ಯಂತ ಹಳೆಯ ಆವಿಷ್ಕಾರಗಳಲ್ಲಿ ಕುಂಬಾರಿಕೆಯು ಒಂದಾಗಿದೆ. ಕುಂಬಾರಿಕೆ ಯಾವಾಗಲೂ ಆಂತರಿಕ ಕಲಾತ್ಮಕ ಗುಣಗಳನ್ನು ಹೊಂದಿದೆ. ಇಂದಿನ ಯುವ ಪೀಳಿಗೆಗೆ ಕುಂಬಾರಿಕೆ ಇತಿಹಾಸವನ್ನು ತಿಳಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಮತ್ತೆ ದೇಸಿ ವಸ್ತುಗಳ ಬಳಕೆ ಹೆಚ್ಚಾಗಿದ್ದು, ಬೇಸಿಗೆ ಆರಂಭ ವಾಗುತ್ತಿರುವ ಸಮಯದಲ್ಲಿ ಜನರು ಆರೋಗ್ಯದ ದೃಷ್ಟಿಯಿಂದ ರೆಫ್ರಿಜಿರೇಟರ್‌ ನಲ್ಲಿರುವ ನೀರಿಗಿಂತ ಮಣ್ಣಿನ ಮಡಿಕೆಯ ನೀರೇ ಉತ್ತಮ ಎಂದು ತಿಳಿಸಿದರು.

ಹತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಕೆ.ಚಂದ್ರು, ವೈ.ಎನ್.ಭಾಗ್ಯಲಕ್ಷ್ಮೀ, ಕೆ.ಬಿ. ಪದ್ಮನಾಥ್, ರಾಘವೇಂದ್ರ, ಈಶ್ವರಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶ್ರೀನಿವಾಸ್, ದೇವರಾಜ್, ರವೀಂದ್ರ, ಸವಿತಾ ಮಂಜುನಾಥ್, ರೂಪಾ ಈಶ್ವರ್, ಚಂದ್ರಿಕಾ ಹರೀಶ್, ಯಶೋಧ ಸುಧೀರ್, ರಮೇಶ್, ಕೃಷ್ಣಮೂರ್ತಿ, ಅನಿತಾ ಓಬಯ್ಯ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು