ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: "ಹೆಣ್ಣು ನಮಗೆ ಹೊರೆಯಲ್ಲ ಹೆಣ್ಣು ಬೇರೆಯವರ ಸ್ವತ್ತಲ್ಲ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಸಬೇಕು, ಹೆಣ್ಣು ಮಕ್ಕಳ ಸಾಧನೆಗಳನ್ನು ಪ್ರೋತ್ಸಾಹಿಸ ಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ವಿ. ರವಿ ಕುಮಾರ್ ಅವರು ಹೇಳಿದರು.
ಅವರು ಮಂಗಳವಾರ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಪಂಚಾಯತ್, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಟರಿ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೇಟಿ ಬಚಾವೋ, ಭೇಟಿ ಪಡಾವೋ (ಮಗಳನ್ನು ಉಳಿಸಿ, ಮಗಳನ್ನು ಓದಿಸಿ) ಯೋಜನೆಯ ದಶಮಾನೋತ್ಸವ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ PC & PNDT ಕಾಯ್ದೆ, POCSO ಮತ್ತು POSH ಕಾಯ್ದೆಗಳ ಬಗ್ಗೆ ಅರಿವು ಅವಶ್ಯಕತೆ ಇದೆ ಎಂದರು.
ಲಿಂಗ ಪಕ್ಷಪಾತ ಮತ್ತು ಲಿಂಗ ಆಯ್ಕೆ ಮಾಡುವುದನ್ನು ತಡೆಗಟ್ಟುವುದು, ಹೆಣ್ಣು ಮಕ್ಕಳ ಉಳಿವು ಮತ್ತು ಅವರ ರಕ್ಷಣೆಯನ್ನು ಖಾತ್ರಿಗೊಳಿಸುವುದು, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಖಾತ್ರಿ ಗೊಳಿಸುವ ಉದ್ದೇಶದಿಂದ “ಬೇಟಿ ಬಚಾವೋ ಬೇಟಿ ಪಡಾವೋ” ಯೋಜನೆಯನ್ನು ಹಮ್ಮಿಕೊಂಡಿರು ವುದು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ವರದಕ್ಷಿಣೆ ಮತ್ತು ಬಾಲ್ಯ ವಿವಾಹವನ್ನು ನಿಷೇಧಿಸುವುದು ಮತ್ತು ಸರಳ ವಿವಾಹವನ್ನು ಪ್ರೋತ್ಸಾಹಿಸುವುದು ನಮ್ಮೆಲರ ಜವಾಬ್ದಾರಿ ಯಾಗಿದೆ. ಹೆಣ್ಣು ಮಕ್ಕಳ ರಕ್ಷಣೆಗಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವ ಯೋಜನೆ (ಕಾಯ್ದೆ) ಗಳ ಕುರಿತ ಮಾಹಿತಿ ನೀಡಿದರು.
ತಹಶೀಲ್ದಾರ್ ಪರುಸಪ್ಪ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, ಕಾರ್ಯದರ್ಶಿ ನಿರಂಜನ್, ಪಬ್ಲಿಕ್ ಇಮೇಜ್ ಕೋ ಆರ್ಡಿನೆಟರ್ ಸುಂದರ್ ಬಾಬು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ.ಅಶೋಕ್, ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಈರಪ್ಪ ಉಪಸ್ಥಿತರಿದ್ದರು.
Tags
ಭದ್ರಾವತಿ ವರದಿ