ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಗೃಹಿಣಿಯೋರ್ವರು ಸೋಮವಾರ ರಾತ್ರಿ ನಿಧನರಾಗಿದ್ದಾರೆಂದು ವೈದ್ಯರು ದೃಢೀಕರಿಸಿದ್ದಾರೆ. ಮಂಗಳವಾರ ಬೆಳಗ್ಗೆ ಅವರ ನಿವಾಸಕ್ಕೆ ಮೃತ ದೇಹವನ್ನು ತಂದು ಇಳಿಸುವಾಗ ಕಣ್ತೆರೆದು ಉಸಿರಾಡಿದ ವಿಸ್ಮಯ ಘಟನೆ ನಡೆದಿದೆ.
ಗಾಂಧಿನಗರ ನಿವಾಸಿ ಗುತ್ತಿಗೆದಾರ ಸುಬ್ರಮಣಿ ಅವರ ಪತ್ನಿ ಮೀನಾಕ್ಷಿ(52) ಅವರನ್ನು ಅನಾರೋಗ್ಯ ನಿಮಿತ್ತ ಶಿವಮೊಗ್ಗದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಮೀನಾಕ್ಷಿ ನಿಧನರಾದ ರೆಂದು ವೈದ್ಯರು ದೃಢಪಡಿಸಿದ್ದರು.
ವಿಷಯ ತಿಳಿದ ಅವರ ಬಂಧು ಬಳಗ ಸೇರಿದಂತೆ ನೂರಾರು ಮಂದಿ ಅವರ ನಿವಾಸದ ಬಳಿ ನೆರೆದಿದ್ದರು. ಮಂಗಳವಾರ ಬೆಳಗ್ಗೆ ಮೃತ ದೇಹ ಅವರ ನಿವಾಸಕ್ಕೆ ತಂದು ಇಳಿಸುವಾಗ ಮೃತರಾಗಿದ್ದವರು ಕಣ್ಣೆರೆದು ನೋಡಿ ಉಸಿರಾಡಿದ್ದಾರೆ.
ಕುಟುಂಬಸ್ಥರು ಅಚ್ಚರಿಗೊಂಡು ನೀರು ಕುಡಿಸಿದ್ದಾರೆ. ತಕ್ಷಣವೇ ಸಮೀಪದ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಂಡು ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ದಿ ದ್ದಾರೆ. ಯಾರಾದರೂ ಮಾತನಾಡಿದರೆ ಉತ್ತರಿಸುತ್ತಾರೆಂದು ಕುಟುಂಬ ಮೂಲಗಳು ತಿಳಿಸಿವೆ.
ಭದ್ರಾ ನದಿ ದಡದಲ್ಲಿರುವ ಶ್ರೀ ಸಂಗಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷ ಶಿವರಾತ್ರಿ ಹಬ್ಬದ ಮುನ್ನಾ ದಿನದಂದು ಲೋಕ ಕಲ್ಯಾಣಾರ್ಥ ಹಮ್ಮಿಕೊಳ್ಳುವ ಹೋಮ- ಹವನ ಮತ್ತಿತರೆ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಸುಬ್ರಮಣಿ ದಂಪತಿ ಹಾಗು ಕುಟುಂಬ ಸದಸ್ಯರು ಭಾಗವಹಿಸುತ್ತಿ ದ್ದರು. ಮಹಾಶಿವರಾತ್ರಿ ಮುನ್ನಾ ದಿನ ಮಂಗಳವಾರ ಸಹ ಅವರೇ ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕಿತ್ತು. ಆದರೆ ವಿಧಿಯಾಟ ಸೋಮವಾರ ರಾತ್ರಿ ಮರಣ ಹೊಂದಿದರೆಂದು ತಿಳಿದು ವೀರಶೈವ ಸೇವಾ ಸಮಾಜ ಬಾಂಧವರಲ್ಲಿ ದುಃಖ ಆವರಿಸಿಕೊಂಡಿತ್ತು. ವೀರಶೈವ ಸಮಾಜದ ಅಧ್ಯಕ್ಷ ಆರ್.ಮಹೇಶ್‌ಕುಮಾರ್ ಮುಖಂಡರಾದ ವಾಗೀಶ್‌ಕೋಠಿ, ಟಿ.ಎಸ್.ಆನಂದಕುಮಾರ್ ಮುಂತಾದವರು ಬೃಹತ್ ಹಾರದೊಂದಿಗೆ ಮೃತರ ನಿವಾಸಕ್ಕೆ ತೆರಳಿದ್ದರು. ಆಗತಾನೆ ವಾಹನದಲ್ಲಿ ಮೃತದೇಹ ತಂದು ಇಳಿಸಿದಾಗ ಕಣ್ಣೆರದು ಉಸಿರಾಡಿದನ್ನು ಕಣ್ಣಾರೆ ಕಂಡು ಆಶ್ಚರ್ಯ ಚಕಿತರಾಗಿದ್ದಾರೆ. ಭಗವಂತ ಅವರಿಗೆ ಇನ್ನೂ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.