ವಿಜಯ ಸಂಘರ್ಷ ನ್ಯೂಸ್
ಕೆ ಆರ್ ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿ ಹಾಲು ಉತ್ಪಾದಕರ ನೌಕರರ ಸಹಕಾರ ಸಂಘದ ವತಿಯಿಂದ ಬೂಕನಕೆರೆ ಸಮುದಾಯ ಭವನದಲ್ಲಿ ಮನ್ಮುಲ್ ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಡಾಲು ರವಿ ಹಾಗೂ ಎಂ ಬಿ ಹರೀಶ್ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು.
ಅಭಿನಂದನೆ ಸ್ವೀಕರಿಸಿದ ಹ್ಯಾಟ್ರಿಕ್ ಸಾಧಿಸಿದ ಮನ್ಮುಲ್ ನೂತನ ನಿರ್ದೇಶಕ ಡಾಲು ಮಾತನಾಡಿ ಮೂರನೇ ಬಾರಿಗೆ ಅವಕಾಶ ಮಾಡಿಕೊಟ್ಟ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಆಡಳಿತ ಮಂಡಳಿಯವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಇದು ನನ್ನ ವೈಯುಕ್ತಿಕ ಗೆಲುವಲ್ಲ ತಾಲ್ಲೂಕಿನ ಹಾಲು ಉತ್ಪಾದಕರ ಗೆಲುವು ಎಂದು ಬಣ್ಣಿಸಿದರು.ಹಲವು ಚುನಾವಣೆ ಗಳನ್ನು ಎದುರಿಸಿದ್ದೇನೆ. ಆದರೆ ಈ ಬಾರಿ ಮನ್ಮುಲ್ ಚುನಾವಣೆಯಲ್ಲಿ ಶಾಸಕರು ಸ್ಪರ್ಧೆ ಮಾಡಿದ್ದ ಕಾರಣ ಇಡೀ ಜಿಲ್ಲೆ ಹಾಗೂ ರಾಜ್ಯದ ಜನರಿಗೆ ಕುತೂಹಲ ಕೆರಳಿಸಿತ್ತು.ನಾವು ನಂಬಿರುವ ಜನ ಹಾಗೂ ಭಗವಂತನ ಆಶೀರ್ವಾದ ದಿಂದ ಜಯಭೇರಿ ಬಾರಿಸಿ ಅದರಲ್ಲೂ ನನ್ನನ್ನು ಹ್ಯಾಟ್ರಿಕ್ ಗೆಲುವಿಗೆ ಕಾರಣರಾಗಿದ್ದೀರಿ. ಇದನ್ನು ಈ ಜನ್ಮದಲ್ಲಿ ಮರೆಯಲು ಸಾಧ್ಯವಿಲ್ಲ.
ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ನನ್ನ ಜೊತೆಗೆ ಮನ್ಮುಲ್ ನಿರ್ದೇಶಕರಾಗಿ ಆಯ್ಕೆಯಾದ ಎಂ ಬಿ ಹರೀಶ್ ಅವರ ಜೊತೆ ಚರ್ಚಿಸಿ ಮನ್ಮುಲ್ ಆಡಳಿತ ಮಂಡಳಿಯವರ ಜೊತೆಗೆ ಮಾತನಾಡಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ.ಇನ್ನೂ ಅನೇಕ ಗ್ರಾಮಗಳಲ್ಲಿ ಸಂಘಗಳಿಲ್ಲ. ಸಂಘಗಳನ್ನು ನೂತನವಾಗಿ ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ ಎಂದು ಮನ್ಮುಲ್ ನೂತನ ನಿರ್ದೇಶಕ ಡಾಲು ರವಿ ಹೇಳಿದರು.
ನೂತನ ಮನ್ಮುಲ್ ನಿರ್ದೇಶಕ ಎಂ ಬಿ ಹರೀಶ್ ಮಾತನಾಡಿ ನಾನು ಮನ್ಮುಲ್ ಚುನಾವಣೆಗೆ ಸ್ಪರ್ಧೆ ಮಾಡಿದಾಗ ನಿಂದಲೂ ಶಾಸಕರು ಹಾಗೂ ಡಾಲು ರವಿ ಅವರು ಗೆಲ್ಲುತ್ತಾರೆ ಎಂದು ನನಗೆ ಹೇಳುತ್ತಿದ್ದರು. ನನಗೆ ಮನ್ಮುಲ್ ನಿರ್ದೇಶಕ ಡಾಲು ರವಿ ಮೇಲೆ ಹಾಗೂ ಮತದಾರರ ಮೇಲೆ ಸಂಪೂರ್ಣ ನಂಬಿಕೆ ಇತ್ತು.ನಾನು ಈ ಬಾರಿ ಜಯಗಳಿಸುತ್ತೇನೆ ಎಂಬ ದಟ್ಟವಾದ ನಂಬಿಕೆ ಇತ್ತು. ಯಾಕೆಂದರೆ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಈಗಿನ ಶಾಸಕ ಹೆಚ್ ಟಿ ಮಂಜು ಅವರು ಶಾಸಕರಾಗಿ ಆಯ್ಕೆಯಾದರೆ ಮನ್ಮುಲ್ ಸೀಟ್ ನಮಗೆ ಬಿಟ್ಟು ಕೊಡುತ್ತಾರೆ ಎಂಬ ನಂಬಿಕೆಯಿಂದ ಚುನಾವಣಾ ಸಂದರ್ಭದಲ್ಲಿ ಹಗಲು ರಾತ್ರಿ ಯನ್ನದೇ ಶ್ರಮಿಸಿದ್ದೆವು.ಅದಕ್ಕೆ ನಮಗೆ ಶಾಸಕರು ಈ ಚುನಾವಣೆ ಯಲ್ಲಿ ಎದುರಾಳಿ ಆಗಿ ಪೈಪೋಟಿ ನಡೆಸಿದರು. ಆದರೂ ಜನ ನಮ್ಮ ಕೈಬಿಡಲಿಲ್ಲ.
ಲೋಕಸಭಾ ಚುನಾವಣಾ ಸಂದರ್ಭ ದಲ್ಲಿ ಡಾಲು ರವಿ ಹಾಗೂ ಎಂ ಬಿ ಹರೀಶ್ ಗೆ ಮನ್ಮುಲ್ ಟಿಕೆಟ್ ಅಂತ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಬಾಯಲ್ಲಿ ಹೇಳಿಸಿದರೂ ಹೆಚ್ ಟಿ ಮಂಜು ಶಾಸಕರಾದ ನಂತರ ನಮಗೆ ಮೋಸ ಮಾಡಿದರು. ನಮ್ಮ ಭಗವಂತನ ಹಾಗೂ ಮತದಾರರು. ಕೈಬಿಡಲಿಲ್ಲ. ಶಾಸಕರು ಕೈಬಿಟ್ಟರೂ ನಾವು ಬಿಡಲ್ಲ ಎಂದು ನಮಗೆ ಆಶೀರ್ವಾದ ಮಾಡಿದರು. ಶಾಸಕ ಸ್ಥಾನಕ್ಕಿಂತ ದೊಡ್ಡ ಹುದ್ದೆಗಿಂತಲೂ ಮನ್ಮುಲ್ ನಿರ್ದೇಶಕ ಸ್ಥಾನ ಶಾಸಕ ಹೆಚ್ ಟಿ ಮಂಜು ಅವರಿಗೆ ಬೇಡ ಎಂಬ ಉದ್ದೇಶದಿಂದ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು ನಮ್ಮನ್ನು ಅತ್ಯಧಿಕ ಬಹುಮತ ನೀಡಿ ಜಯಗಳಿಸಲು ಕಾರಣರಾಗಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ರಾಜಕಾರಣ ಮಾಡೋಣ ಮುಗಿದ ಮೇಲೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ದುಡಿಯೋಣ ಎಂದು ಎಂ ಬಿ ಹರೀಶ್ ತಿಳಿಸಿದರು.
ಈ ಸಂದರ್ಭದಲ್ಲಿ ಗಂಜಿಗೆರೆ ಸೊಸೈಟಿ ಮಾಜಿ ಅಧ್ಯಕ್ಷ ನಾಗರಾಜೇಗೌಡ, ಮನ್ಮುಲ್ ಉಪಕಚೇರಿ ವ್ಯವಸ್ಥಾಪಕ ಪ್ರಸಾದ್, ಬೂಕನಕೆರೆ ಡೇರಿ ಅಧ್ಯಕ್ಷ ನಾಗೇಶ್,ಬಸ್ತಿ ನಾಗರಾಜು, ಮಹೇಶ್, ಲವಕುಮಾರ್,ಮೋದೂರು ಡೇರಿ ಕಾರ್ಯದರ್ಶಿ ಪಾಪಣ್ಣಿ ಮೋಹನ್ ಸೇರಿದಂತೆ ಉಪಸ್ಥಿತರಿದ್ದರು.
Tags
ಕೆ ಆರ್ ಪೇಟೆ ವರದಿ