ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿ ಕಾರದ ನಗರದ ಸರ್.ಎಂ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಪುನಶ್ಚೇತನಗೊಳಿ ಸುವ ಪ್ರಯತ್ನ ನಡೆಯುತ್ತಿದ್ದು, ವಿಸ್ತೃತ ಯೋಜನಾ ವರದಿ (DPR) ಎರಡು ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಅವರು ಶುಕ್ರವಾರ ನವದೆಹಲಿಯ ತಮ್ಮ ನಿವಾಸದಲ್ಲಿ ಮಾಧ್ಯಮ ಗೋಷ್ಠಿಯದ್ದೇಶಿಸಿ ಮಾತನಾಡಿ, ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವ ಪ್ರಶ್ನೆ ಇಲ್ಲ ಎಂಬುದನ್ನು ಒತ್ತಿ ಹೇಳಿದರು.
ಈ ವರ್ಷಾಂತ್ಯಕ್ಕೆ ಪುನಶ್ಚೇತನ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಪುನಾ ಹೊಸದಾಗಿ ಇಡೀ ಕಾರ್ಖಾನೆಯನ್ನು ಹೊಸದಾಗಿ ಅತ್ಯಾಧುನಿಕವಾಗಿ ನಿರ್ಮಾಣ ಮಾಡಲಾಗುವುದು.ಪ್ರಧಾನಿ ನರೇಂದ್ರ ಮೋದಿ ಅವರೇ ಈ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ ಎಂದು ಹೇಳಿದರು.
ಕಾರ್ಖಾನೆಯನ್ನು ಹೊಸದಾಗಿ ಮರು ನಿರ್ಮಾಣ ಮಾಡಬೇಕಿದೆ. ಇದಕ್ಕೆ ಸುಮಾರು 8 ರಿಂದ 10 ಸಾವಿರ ಕೋಟಿ ಹೂಡಿಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಈಗಾಗಲೇ ಆ ಕಾರ್ಖಾನೆ ಭಾರತೀಯ ಉಕ್ಕು ಪ್ರಾಧಿಕಾರದ (SAIL) ಅಧೀನದಲ್ಲಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರದಲ್ಲಿ ಉಕ್ಕು ಕ್ಷೇತ್ರದಲ್ಲಿ ಪ್ರಾಧಿಕಾರ ಒಂದು ಲಕ್ಷ ಕೋಟಿ ಮೊತ್ತ ಹೂಡಿಕೆ ಮಾಡಲಿದೆ. ಅದೇ ಸಂದರ್ಭ ದಲ್ಲಿ ವಿಐಎಸ್ಎಲ್ ಕಾರ್ಖಾನೆಯನ್ನು ಕೂಡ ಪುನಶ್ಚೇತನ ಗೊಳಿಸಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ 2030ರ ಹೊತ್ತಿಗೆ ದೇಶೀಯವಾಗಿ ವಾರ್ಷಿಕ 300 ದಶಲಕ್ಷ ಟನ್ ಸ್ಟೀಲ್ ಉತ್ಪಾದನೆ ಗುರಿ ನಿಗದಿ ಮಾಡಿದ್ದು, ಅದಕ್ಕೆ ಪೂರಕವಾಗಿ ಸರಕಾರಿ ಸ್ವಾಮ್ಯದಲ್ಲಿ ರುವ ಉಕ್ಕು ಸ್ಥಾವರಗಳನ್ನು ಬಲಪಡಿ ಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.