ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮುಸುಕುಧಾರಿ ದರೋಡೆ ಕೋರ ಚಡ್ಡಿ ಗ್ಯಾಂಗ್ ತಡರಾತ್ರಿ ಸಿದ್ಧಾರೂಢ ನಗರ ಬಡಾವಣೆಯಲ್ಲಿ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.ಇತ್ತೀಚೆಗೆ ಶಿವಮೊಗ್ಗ ದಲ್ಲಿ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು.
ಹಳೇನಗರ ವ್ಯಾಪ್ತಿಯ ಸಿದ್ದಾರೂಢ ನಗರ ದಲ್ಲಿ ಈ ಚಡ್ಡಿ ಗ್ಯಾಂಗ್ ನಸುಕಿನ ಸುಮಾರು 2.30 ರ ವೇಳೆಗೆ ಕಾಣಿಸಿ ಕೊಂಡಿದ್ದು, ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಸಿದ್ಧರೂಢನಗರದ ಡಾ.ಅಶ್ವತ್ಥ ನಾರಾಯಣ ಎಂಬುವರ ಮನೆಯ ಕಾಂಪೌಂಡ್ ಹಾರಿ ಒಳ ಬಂದಿರುವ ದುಷ್ಕರ್ಮಿಗಳು ಹೊರ ಭಾಗದಲ್ಲಿ ತಪಾಸಣೆ ನಡೆಸಿದ್ದಾರೆ. ಮನೆಯವರು ಎಚ್ಚರಗೊಂಡ ಲೈಟ್ ಹಾಕಿದ್ದಾರೆ. ಇದರಿಂದ ತಂಡ ಸ್ಥಳದಿಂದ ಕಾಲ್ಕಿತ್ತಿದೆ ಎಂದು ವರದಿಯಾಗಿದೆ.
ಮುಖವನ್ನು ಬಟ್ಟೆಯಿಂದ ಮುಚ್ಚಿ ಕೊಂಡು, ಮಾರಕಾಸ್ತ್ರಗಳನ್ನು ಹಿಡಿದಿರುವ ಆರೇಳು ಜನರು ದರೋಡೆ ನಡೆಸಲು ಸಂಚು ನಡೆಸಿದ್ದಾರೆ. ಕೆಲವು ಮನೆಗಳ ಹೊರಭಾಗ ದಲ್ಲಿ ತಪಾಸಣೆ ಕೂಡ ಮಾಡಿದ್ದು, ಸದರಿ ದೃಶ್ಯಗಳು ಮನೆಗಳ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಸದರಿ ದೃಶ್ಯಗಳು ಕ್ಯಾಮರಾದಲ್ಲಿ ದಾಖಲಾಗಿದೆ.
ಇದೇ ವೇಳೆ ಬಡಾವಣೆಯಲ್ಲಿ ಬೀಟ್ ಪೊಲೀಸ್ ಸಿಬ್ಬಂದಿಗಳು ಬೈಕ್ ನಲ್ಲಿ ಆಗಮಿಸಿದ್ದಾರೆ. ಇವರನ್ನು ಕಂಡ ದುಷ್ಕರ್ಮಿ ಗಳು, ಭದ್ರಾನದಿಯ ಮೂಲಕ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪಿ ಎಸ್ ಐ, ಎಎಸ್'ಐ ಮತ್ತವರ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಡಕಾಯಿತರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ದುಷ್ಕರ್ಮಿಗಳ ಸುಳಿವು ಪತ್ತೆಯಾಗಿಲ್ಲ.
ಘಟನೆಯ ನಂತರ ಪೊಲೀಸರು ಹೈಅಲರ್ಟ್ ಆಗಿದ್ದು, ಡಕಾಯಿತರ ತಂಡದ ಪತ್ತೆಗೆ ವ್ಯಾಪಕ ಕ್ರಮಕೈ ಗೊಂಡಿದ್ದಾರೆ. ಗಸ್ತು ವ್ಯವಸ್ಥೆ ಹೆಚ್ಚಿಸಿರುವ ಮಾಹಿತಿಗಳು ತಿಳಿದು ಬಂದಿದೆ. ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ನಾಗರಿಕರ ಭದ್ರತೆಗೆ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ.