ವಿಜಯ ಸಂಘರ್ಷ ನ್ಯೂಸ್
ಬೆಳಕಿನ ಓಕಳಿಯನ್ನುಂಟು ಮಾಡುವ ದೀಪಗಳ ಹಬ್ಬ ದೀಪಾವಳಿ. ಬಡವರು, ಶ್ರೀಮಂತರು, ಮೇಲು, ಕೀಳು, ಎಂಬ ಬೇಧ ಭಾವವ ತೊರೆದು ಎಲ್ಲರೂ ಸಡಗರದಿಂದ ಮಿಂಚಿನ ರಂಗುರಂಗಿನ ಪಟಾಕಿ ಹೊಡೆದು ಸಂಭ್ರಮಿಸಿ ಆಚರಿಸೋ ಹಬ್ಬ. ಸಿಹಿ ತಿಂಡಿಗಳನ್ನು ಮಾಡಿ, ಹೊಸ ಬಟ್ಟೆಗಳನ್ನು ಖರೀದಿಸಿ, ಪಟಾಕಿಗಳನ್ನು ತಂದು ಆನಂದದಿಂದ ದೀಪಗಳನ್ನು ಹಚ್ಚಿ ಮನೆಯಲ್ಲಿ ಬೆಳಕಿನ ಹೊಳಪನ್ನು ಹೆಚ್ಚಿಸಿ, ನಾಡಲ್ಲಿ ಬೆಳಕಿನ ಕ್ರಾಂತಿ ಹೊರಹೊಮ್ಮಿ ಸುವ ಹಬ್ಬ ದೀಪಾವಳಿ.
ಹಬ್ಬ ಎಂದಾಕ್ಷಣ ಮನೆಯನ್ನು ಸ್ವಚ್ಛ ಗೊಳಿಸಿ, ವಿಶೇಷ ಪೂಜೆ, ನೈವಿದ್ಯ, ವಿಧ ವಿಧದ ಸಿಹಿ ತಿಂಡಿಗಳನ್ನು ಮಾಡಿ, ದೀಪಗಳನ್ನು ಹಚ್ಚಿ ಹಬ್ಬವನ್ನು ಆಚರಿಸುತ್ತಾರೆ.
ನಮ್ಮ ಭಾರತ ದೇಶವು ವಸುದೈವ ಕುಟುಂಬ, ಅವಿಭಕ್ತ ಕುಟುಂಬದ ಪಾರಂಪರಿಕ ರಾಷ್ಟ್ರ. ಆದರೆ ಇತ್ತೀಚೆಗೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ಹೋಗುತ್ತಿವೆ. ಕುಟುಂಬಗಳು ಒಡೆದು ವಿಭಕ್ತ ಕುಟುಂಬಗಳಾಗಿ ಹೊರಹೊಮ್ಮುತ್ತಿವೆ. ಕಾರಣ ವ್ಯಕ್ತಿಯಲ್ಲಿರುವ ಹಣ, ಅಧಿಕಾರ, ಆಸ್ತಿ, ಅಂತಸ್ತು, ಕೀಳಾಗಿ ನೋಡುವುದು, ನಾನೇ ಶ್ರೇಷ್ಠ ಎಂಬ ಭಾವನೆಯಿಂದಾಗಿ.
ಹಬ್ಬ ಅನ್ನೋದು ಕೇವಲ ಗಂಡ ಹೆಂಡತಿ ಮಾತ್ರ ಮಾಡೋದಲ್ಲ. ಕೂಡು ಕುಟುಂಬದ ಎಲ್ಲಾ ಸದಸ್ಯರು ಸೇರಿಕೊಂಡು ಆಚರಿಸು ವಂಥದ್ದು. ಅದು ಯಾವಾಗ ಸಾಧ್ಯವಾಗು ತ್ತದೆ ಎಂದರೆ ಮನದಲ್ಲಿ ಪ್ರೀತಿ, ಒಳ್ಳೆಯ ಭಾವನೆ, ನನ್ನವರು ತನವು ಇದ್ದಾಗ.
ದೀಪಾವಳಿ ಹಬ್ಬದಲ್ಲಿ ಹಬ್ಬದ ಹಿಂದಿನ ದಿನ ನೀರು ತುಂಬೋ ಕಾರ್ಯಕ್ರಮವನ್ನು ಮಾಡುತ್ತಾರೆ. ಮನೆಯಲ್ಲಿ ಇದ್ದ ನೀರನ್ನು ಚೆಲ್ಲಿ ಹೊಸ ನೀರನ್ನು ತುಂಬುತ್ತಾರೆ. ನೀರು ಚೆಲ್ಲೋ ಹಾಗೆ ಮನಸಲ್ಲಿರುವ ಸುಳ್ಳು, ಮೋಸ,ದ್ರೋಹದ ಕೆಟ್ಟತನವನ್ನು ಹೊರ ಹಾಕಬೇಕು.
ನಾನೇ ಶ್ರೇಷ್ಠ, ನನ್ನದೇ ಸರಿ ಎಂದು ಗರ್ವ ತುಂಬಿರುವ ದೇಹವನ್ನು ಹಣತೆಯನ್ನಾಗಿ ಮಾಡಿ, ಮುಖಕ್ಕೆ ಬಣ್ಣ ಬಡಿದುಕೊಳ್ಳುವ ಹಾಗೆ, ಮನಸ್ಸಿಗೆ ಬಣ್ಣ ಹಚ್ಚಿಕೊಂಡು ಹೊರಗೊಂದು ಒಳಗೊಂದು ಆಡುವ ಕೆಟ್ಟತನವನ್ನು ಎಣ್ಣೆಯನ್ನಾಗಿ ಮಾಡಿ, ದುಡ್ಡಿದೆ,ಗಳಿಸಿದ್ದೇನೆ ಎಂದು ಬೀಗದೆ, ಗಳಿಸಿದ್ದೆಲ್ಲಾ ಒಂದಲ್ಲ ಒಂದು ದಿನ ಬಿಟ್ಟು ಹೋಗುತ್ತದೆ ಎಂದು ತಿಳಿದು, ನಿನ್ನಲ್ಲಿರುವ ದುಡ್ಡಿನ ಅಹಂಕಾರವನ್ನು ಬತ್ತಿಯನ್ನಾಗಿ ಮಾಡಿ, ದ್ವೇಷ,ಕೋಪ, ಆಸೂಹೆ ತುಂಬಿದ ಮನದ ಕೆಟ್ಟತನದ ಬುದ್ಧಿಯನ್ನು ಬೆಂಕಿ ಕಡ್ಡಿಯನ್ನಾಗಿ ಮಾಡಿ,ಪ್ರೀತಿ,ಸ್ನೇಹ, ಸಂಬಂಧ,ವಾತ್ಸಲ್ಯ ತುಂಬಿದ ಮನದ ಕಡ್ಡಿಯಿಂದ ಮನೆಯನ್ನು,ಮನಸುಗಳನ್ನು ಬೆಳಗುವಂತೆ ದೀಪವನ್ನು ಹಚ್ಚಬೇಕು. ಇದು ನಿಜವಾದ ದೀಪಗಳ ಲೀಲಾವಳಿಯ ಹಬ್ಬ ದೀಪಾವಳಿ.
-------> ನಾಗೇಶ್ ಕೆ.ಎಸ್.
ಪತ್ರಿಕೋಧ್ಯಮ ವಿದ್ಯಾರ್ಥಿ
ಶಂಕರಘಟ್ಟ. ಭದ್ರಾವತಿ