ಪೋಷಕರ ಮೇಲೆ ಪ್ರೀತಿ ತೋರದ ಕಾರಣ ಹಿರಿಯರು ವೃದ್ದಾಶ್ರಮ ಸೇರಬೇಕಾದ ಪರಿಸ್ಥಿತಿ ನಿರ್ಮಾಣ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಇಂದಿನ ಯುವಪೀಳಿಗೆ ತಮ್ಮ ಮಕ್ಕಳನ್ನು ಗಮನಿಸುವ ರೀತಿಯಲ್ಲಿ ಹಿರಿಯ ಪೋಷಕರನ್ನು ನೋಡಿಕೊಳ್ಳುವಂತಾಗ ಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್ ಕುಮಾರ್ ಹೇಳಿದರು.

ಶನಿವಾರ ನಗರದ ಬೈಪಾಸ್ ರಸ್ತೆ ಸಮೀಪದ ಎಂಪಿಎಂ ಲೇಔಟ್ ನಲ್ಲಿನ ಸಂಜೀವಿನಿ ವೃದ್ದಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೋಷಕರಲ್ಲಿ ನೆಮ್ಮದಿ ಇರಲು ಮಕ್ಕಳ ಸಹಕಾರ, ಪ್ರೀತಿ ಮುಖ್ಯ. ಇಂದಿನ ದಿನಗಳಲ್ಲಿ ಮಕ್ಕಳು ಪೋಷಕರ ಮೇಲೆ ಪ್ರೀತಿ ತೋರದಿರುವ ಕಾರಣದಿಂದ ಹಿರಿಯರು ವೃದ್ದಾಶ್ರಮ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾಧ ವ್ಯಕ್ತ ಪಡಿಸಿದರು.

ವೃದ್ದಾಶ್ರಮಗಳಿಂದ ಅದೆಷ್ಟೋ ಹಿರಿಯ ನಾಗರಿಕರಿಗೆ ಅನುಕೂಲವಾಗಿದೆ. ಅದರಲ್ಲಿ ಸಂಜೀವಿನಿ ವೃದ್ದಾಶ್ರಮದಲ್ಲಿ ವೃದ್ಧರಿಗೆ ಕಲ್ಪಿಸಿರುವ ಸೌಲಭ್ಯಗಳ ಕುರಿತು ಪ್ರಶಂಷೆ ವ್ಯಕ್ತಪಡಿಸಿ,ಮುಂದಿನ ದಿನಗಳಲ್ಲಿ ಆಶ್ರಮಕ್ಕೆ ಬೇಕಾದ ನಿವೇಶನಕ್ಕೆ ಶಾಸಕರ ಗಮನಕ್ಕೆ ತಂದು ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.

ಆಶ್ರಮದ ಸಂಸ್ಥಾಪಕ ಅಧ್ಯಕ್ಷೆ ಸವಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಂಬಿಕಾ ಪ್ರಾರ್ಥಿಸಿ, ಶಾರದಾ ಸ್ವಾಗತಿಸಿದರೆ, ಸುಮಾ ಬಂಡಾರಹಳ್ಳಿ ನಿರೂಪಿಸಿ, ನಾಗಭೂಷಣ್ ವಂದಿಸಿದರು.

ಪೇಪರ್ ಟೌನ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು