ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಫಿಲ್ಟರ್ ಶೆಡ್ ಏರಿಯಾ ವಿಐಎಸ್ ಎಲ್ ಕಾರ್ಖಾನೆಗೆ ಸೇರಿದ ಅಂತರಘಟ್ಟ ದೇವಾಲಯ ಸಮೀಪದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಸಮುದಾಯ ಭವನ ವಶಕ್ಕೆ ಪಡೆದು ಸ್ಥಳೀಯ ನಾಗರಿಕರಿಗೆ ಅನುಕೂಲ ಮಾಡಿಕೊಡುವಂತೆ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿಯಿಂದ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕುಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಜನ್ನಾಪುರ ಫಿಲ್ಟರ್‌ಶೆಡ್‌ನಲ್ಲಿ ಕಾರ್ಖಾನೆಗೆ ಸೇರಿದ ಸರ್ವೆ ನಂ.7ರಲ್ಲಿ 25*70 ಅಳತೆಯ ಜಾಗದಲ್ಲಿ ಕಾನೂನುಬಾಹಿರವಾಗಿ ಸರ್ಕಾರಿ ಜಾಗಎಂದು ನಗರಸಭೆಗೆ ಸುಳ್ಳು ದಾಖಲೆ ಗಳನ್ನು ನೀಡಿ ಖಾತೆ ಮಾಡಿ ಕೊಂಡು ನಂತರ ಟ್ರಸ್ಟ್ ರಚಿಸಿಕೊಂಡು ಶಾಸಕರ ಹಾಗೂ ಸಂಸದರ ಅನುದಾನ ದಲ್ಲಿ ಹಾಗೂ ಸಾರ್ವಜನಿಕರ ದೇಣಿಗೆ ಯಲ್ಲಿ ಖಾಸಗಿ ವ್ಯಕ್ತಿಗಳು ಸಮುದಾಯ ಭವನ ನಿರ್ಮಾಣ ಮಾಡಿದ್ದಾರೆಂದು ಮನವಿಯಲ್ಲಿ ದೂರಲಾಗಿದೆ.
ಈ ಸಂಬಂಧ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿಯಿಂದ ಸ್ಥಳೀಯ ನಿವಾಸಿಗಳು ಸುಮಾರು 405 ದಿನ ಗಳಿಂದ ಧರಣಿ ಸತ್ಯಾಗ್ರಹ ನಡೆಸು ತ್ತಿದ್ದು, ಅಲ್ಲದೆ ಹಲವಾರು ಕಾರ್ಖಾನೆ ಅಧಿಕಾರಿಗಳಿಗೆ ಈ ಸಂಬಂಧ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಆರೋಪಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ, ಮಾದೇವಿ, ದಿವ್ಯಶ್ರೀ ಮತ್ತಿತರರು ಉಪಸ್ಥಿತರಿದ್ದರು.