ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಜಗತ್ತಿಗೆ ತ್ಯಾಗ, ಪ್ರೀತಿ, ಐಕ್ಯತೆಯ ಸಂದೇಶ ಸಾರಿದ ಯೇಸು ಕ್ರಿಸ್ತನ ಜನ್ಮದಿನವನ್ನು ಗುರುವಾರ ತಾಲೂಕಿನಾ ದ್ಯಂತ ಸಡಗರ, ಸಂಭ್ರಮ ದಿಂದ ಆಚರಿಸಲಾಯಿತು.
ಹಳೇನಗರ ಗಾಂಧಿನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯ, ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯ, ಕಾರೇಹಳ್ಳಿ ಸಂತ ಅಂತೋಣಿಯವರ ದೇವಾಲಯ, ಕಾಗದ ನಗರದ ಕಾರ್ಮಿಕರ ಸಂತ ಜೋಸೆಫರ ದೇವಾಲಯ, ಮಾವಿನ ಕೆರೆ ಸಂತ ತೆರೆಸಮ್ಮನವರ ದೇವಾಲಯ, ನ್ಯೂಟೌನ್ ವೇನ್ಸ್ ಚರ್ಚ್, ಬೈಪಾಸ್ ರಸ್ತೆ, ಬುಳ್ಳಾಪುರ ತೆಲುಗು ಚರ್ಚ್ ಸೇರಿದಂತೆ ತಾಲೂಕಿನ ಹಲವು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಚರ್ಚ್‌ಗಳಲ್ಲಿ ನಿರ್ಮಿಸಲಾಗಿದ್ದ ಕ್ರಿಸ್‌ಮಸ್ ಟ್ರೀ,ವಿವಿಧ ರೀತಿಯ ನಕ್ಷತ್ರಗಳು, ಯೇಸು ವಿನ ಜನನ ವೃತ್ತಾಂತ ನೆನಪಿಸುವ ಗೋದಲಿ ಗಳು, ದೀಪ ಅಲಂಕಾರದೊಂದಿಗೆ ಗಮನ ಸೆಳೆದವು. ಬುಧವಾರ ಮಧ್ಯರಾತ್ರಿ ಹಾಗೂ ಮುಂಜಾನೆ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಕ್ರೈಸ್ತರು ಸಮುದಾಯ ದವರು ಪಾಲ್ಗೊಂಡಿದ್ದರು.
"ಕ್ರಿಸ್ಮಸ್ " ಶುಭಗಳಿಗೆಯ ಸ್ಮರಣೆ ಇದರ ಸಂಕೇತವಾಗಿ ಬಿಳಿ ಮೇಣದ ಬತ್ತಿಗಳನ್ನು ಬೆಳಗಿಸ ಲಾಯಿತು. ಪುಟ್ಟ ಮಕ್ಕಳು ಸಂತ ಕ್ಲಾಸ್ ವೇಷ ಧರಿಸಿ ಗಮನ ಸೆಳೆದರು.
ಚರ್ಚ್‌ಗಳಲ್ಲಿ ಕೇಕ್ ಹಂಚಲಾಯಿತು. ಸಾಂತಾ ಕ್ಲಾಸ್ ವೇಷ ಧರಿಸಿ `ಕ್ರಿಸ್‌ಮಸ್' ಗೀತೆಗಳು(ಕ್ಯಾರೆಲ್ಸ್), ಯುವ ಸಮುದಾಯ ದವರು ಸಂಗೀತದ ಅಬ್ಬರದೊಂದಿಗೆ ಗಾಯನ, ನೃತ್ಯ ನಡೆಸಿ ಸಂಭ್ರಮಿಸಿದರು. ಮತ್ತೊಂದೆಡೆ ಕ್ರೈಸ್ತ ಸಮುದಾಯ ದವರ ಮನೆ ಮನೆಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತ ನಕ್ಷತ್ರಗಳು ಕಂಗೊಳಿಸಿದವು. ಕೆಲವೆಡೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ವ್ಯಕ್ತಪಡಿಸ ಲಾಯಿತು. ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ನೆರೆಹೊರೆಯ ಜನರಿಗೆ ಹಂಚಿ, ಹಬ್ಬದ ಬಗೆ ಬಗೆಯ ಭೋಜನ ಸವಿಯಲಾಯಿತು.
ಕ್ರಿಸ್‌ಮಸ್ ಬಾಹ್ಯ ಆಡಂಬವರಾಗಿರದೆ ಪರರ ಕಷ್ಟಕ್ಕೆ ಸ್ಪಂದಿಸುವ ಹಬ್ಬವಾಗಿದೆ. ಈ ಬಾರಿ ಕ್ರಿಸ್‌ಮಸ್ ಹಬ್ಬವನ್ನು ವಿಶ್ವಗುರು ಪೋಪ್ ಲಿಯೋರವರು ಜ್ಯೂಬಿಲಿ ವರ್ಷವನ್ನಾಗಿ ವಿಶೇಷವಾಗಿ ಘೋಷಿಸಿ, ಭರವಸೆಯ ಯಾತ್ರಾತ್ರಿಗಳು' ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲು ವಿಶ್ವದಾದ್ಯಂತ ಕರೆ ನೀಡಿದ್ದರು. ವರ್ಷವಿಡಿ ಈ ವಾಕ್ಯದಡಿಯಲ್ಲಿ ಪ್ರಾರ್ಥಿಸಿದ್ದು , ಇದರ ಸಮಾರೋಪವನ್ನು ಇದೆ ಸಂದರ್ಭದಲ್ಲಿ ವಿಶ್ವದ ಎಲ್ಲಾ ಚರ್ಚ್‌ಗಳಲ್ಲಿಯೂ ನೆರವೇರಿಸಲಾಗಿದೆ. ಯೇಸುಕ್ರಿಸ್ತರು ಭೂಲೋಕಕ್ಕೆ ಬಂದದ್ದು, ಮನುಜ ಜನ್ಮವನ್ನು ಸ್ವಾರ್ಥವಿಲ್ಲದೆ ಸಾರ್ಥಕ ಗೊಳಿಸಲು ಎಂಬುದಾಗಿದೆ. ಈ ಭರವಸೆ ಅಳವಡಿಸಿ ಜನರು ಜೀವನ ನಡೆಸಬೇಕು ಎಂದು ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರು ಫಾದರ್ ಸ್ಟೀವನ್ ಡೇಸಾ ತಿಳಿಸಿದರು.
ದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳು, ಭ್ರಷ್ಟಾಚಾರದ ರಾಜಕಾರಣ ವೈಮನಸ್ಸು ದೂರವಾಗಿ, ಎಲ್ಲರೂ ನಿಸ್ವಾರ್ಥ ಸೇವೆ ಮಾಡುವುದರೊಂದಿಗೆ ಐಕ್ಯತೆ, ಸಮಾನತೆ ಮೂಡಲಿ . ವಿಶ್ವದಲ್ಲಿ ಶಾಂತಿ ನೆಲೆಸಲಿ, ಉತ್ತಮ ಜೀವನ ನಡೆಸಲು ಬೇಕಾದ ಸ್ಥೈರ್ಯ. ಮನೋಬಲವನ್ನು ದೇವರು ನೀಡಲಿ. ದೇಶದಲ್ಲಿ ಸೇವಾ ಮನೋಭಾವ ಮೂಡಲಿ ಎಂದು ಕ್ರೈಸ್ತರು ಪ್ರಾರ್ಥಿಸಿದರು.