ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರಸಭೆ ಉಳಿದ ಅವಧಿಗೆ ಉಪಾಧ್ಯಕ್ಷರಾಗಿ 8 ನೇ ವಾರ್ಡ್ ಸದಸ್ಯ ಬಷೀರ್ ಅಹಮದ್ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
35 ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಅತಿ ಹೆಚ್ಚು 18 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, 2ನೇ ಅವಧಿಯಲ್ಲಿ ಸಾಮಾನ್ಯ ಮೀಸಲಾತಿ ಹೊಂದಿರುವ ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ.11 ರ ಸದಸ್ಯ ಎಂ.ಮಣಿ ಎಎನ್‌ಎಸ್ ಆಯ್ಕೆಯಾಗಿ ಈಗಾಗಲೇ 16 ತಿಂಗಳು ಅಧಿಕಾರ ನಿರ್ವಹಿಸಿ ದ್ದಾರೆ. ಉಳಿದ ಅವಧಿಗೆ ಬಷೀರ್ ಅಹಮದ್ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಹಾಗು ಸಹಾಯಕ ಚುನಾವಣಾಧಿಕಾರಿ ಯಾಗಿ ಪೌರಾಯುಕ್ತ ಕೆ.ಎನ್. ಹೇಮಂತ್ ಕಾರ್ಯನಿರ್ವಹಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಷೀರ್ ಅಹಮದ್ ಹೊರತು ಪಡಿಸಿ ಬೇರೆ ಯಾರು ಸಹ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಅವಿರೋಧ ಆಯ್ಕೆ ಘೋಷಿಸಲಾಯಿತು.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾಗಿರುವ ಬಷೀರ್ ಅಹಮದ್ ಇದೀಗ ಮೊದಲ ಬಾರಿಗೆ ನಗರಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾರಾಜ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸದಸ್ಯರಾದ ಬಿ.ಕೆ ಮೋಹನ್, ವಿ.ಕದಿರೇಶ್, ಬಸವರಾಜ್ ಬಿ.ಆನೆಕೊಪ್ಪ, ಚನ್ನಪ್ಪ ಸೇರಿದಂತೆ ಇನ್ನಿತರ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿ ಕಾರಿಗಳು ನೂತನ ಉಪಾಧ್ಯಕ್ಷ ಬಷೀರ್ ಅಹಮದ್‌ರನ್ನು ಅಭಿನಂದಿಸಿದರು.