ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ತರೀಕೆರೆ ರಸ್ತೆಯ ಶಿವನಿ ವೃತ್ತಕ್ಕೆ'ವಿಶ್ವ ಮಾತೆ' ಮದರ್ ತೆರೇಸಾ ಸರ್ಕಲ್' ಎಂದು ಸರ್ಕಾರದ ಆದೇಶ ಸಂಖ್ಯೆ ನಮೂದಿಸಿ ನಗರ ಸಭೆಯಿಂದ ನಾಮಫಲಕ ಅಳವಡಿಸ ಲಾಗಿದೆ. ಈ ನಾಮಫಲಕಕ್ಕೆ ಹಿಂದೂ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದು, ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ನಗರ ಸಭೆ ಆಡಳಿತ ವಿರುದ್ಧ ಪ್ರತಿಭಟನೆ ನಡೆಸಿ ನಾಮಫಲಕ ತೆರವು ಗೊಳಿಸು ವಂತೆ ಮನವಿ ಸಲ್ಲಿಸಿದರು.
ಶಿವನಿ ತಿರುವು(ಕ್ರಾಸ್) ಹೆಸರು ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆಗಳ ಪ್ರಮುಖರು, ತಾಲೂಕಿನ ಪುರಾಣ ಪ್ರಸಿದ್ದ ಶ್ರೀ ಕ್ಷೇತ್ರ ಉದ್ದಾಂಜನೇಯ ಸ್ವಾಮಿ ಹಾಗು ಶ್ರೀ ಗುಡ್ಡದ ಕೆಂಚಮ್ಮನ ದೇವಿ ದೇವಸ್ಥಾನ ರಸ್ತೆಗೆ ಮತ್ತು ಸುಮಾರು 40-50 ಹಳ್ಳಿಗಳಿಗೆ ಪ್ರಮುಖ ಮಾರ್ಗವಾಗಿ ಸಂಪರ್ಕ ಗೊಂಡಿರುವ ರಸ್ತೆಯ ವೃತ್ತಕ್ಕೆ ಮದರ್ ತೆರೇಸಾ ಸರ್ಕಲ್ ಎಂದು ನಾಮಕರಣ ಗೊಳಿಸಿರುವುದು ಖಂಡನೀಯ.
ಈ ಭಾಗದ ಸುತ್ತಮುತ್ತಲ ಪ್ರದೇಶ ಗಳಲ್ಲಿ ಶೇ.99ರಷ್ಟು ಹಿಂದೂಗಳು ವಾಸಿಸುತ್ತಿದ್ದು, ನಗರಸಭೆ ಆಡಳಿತ ಸ್ಥಳೀಯರ ಅನುಮತಿ ಪಡೆಯದೆ ನಿರ್ಣಯ ಕೈಗೊಂಡಿದೆ ಎಂದು ಆರೋಪಿಸಿದರು.
ಮದರ್ ತೆರೇಸಾ ಸರ್ಕಲ್ ನಾಮಫಲಕ ಅಳವಡಿಕೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದ್ದು, ಗ್ರಾಮೀಣ ಜನರು ತಮ್ಮ ವಿಳಾಸ ಹೇಳಲು ಹಿಂಜರಿ ಯುವಂತಾಗಿದೆ. ತಕ್ಷಣ ನಾಮಫಲಕ ತೆರವುಗೊಳಿಸಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿ ನಂತರ ನಗರಸಭೆ ಕಛೇರಿವರೆಗೂ ಮೆರವಣಿಗೆ ಯಲ್ಲಿ ಸಾಗಿ ಪೌರಾಯುಕ್ತ ಕೆ.ಎನ್ ಹೇಮಂತ್ ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ವಿವಿಧ ಹಿಂದೂ ಸಂಘಟನೆಗಳ ಪ್ರಮುಖರಾದ ಮಂಜುನಾಥ್, ಚಂದ್ರು ದೇವರಹಳ್ಳಿ, ಧನುಷ್ ಬೋಸ್ಲೆ, ಮುನಿರಾಜು, ಭಾನುಪ್ರಕಾಶ್ ಆಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು.