ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್‌ಗೆ ಎಂಆರ್ ಪಿ ಗಿಂತ ಹೆಚ್ಚಿನ ಹಣ ಪಡೆದಿದ್ದರ ಪರಿಣಾಮ ಪ್ಲಿಪ್‌ಕಾರ್ಟ್ ವ್ಯವಸ್ಥಾಪಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 25 ಸಾವಿರ ದಂಡವನ್ನು ವಿಧಿಸಿದೆ.
ಮಂಡಘಟ್ಟದ ನಿವಾಸಿ ಶಿವಕುಮಾರ್ ಎಸ್. ಎಂಬುವವರು ಫ್ಲಿಪ್ ಕಾರ್ಟ್ ಆನ್‌ಲೈನ್ ಮಾರುಕಟ್ಟೆಯಲ್ಲಿ ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್ ಖರೀದಿಸಲು ಮುಂದಾಗಿದ್ದಾರೆ . ಪ್ರೈಮರ್ ಖರೀದಿಸುವಾಗ ಆಫರ್ ಇದ್ದ ಕಾರಣ ಅವರು ಒಟ್ಟು 540 ರೂಪಾಯಿಗಳನ್ನು ಪಾವತಿಸಿ ಪ್ರೈಮರ್ನ್ನು ಬುಕ್ ಮಾಡಿದ್ದರು. ಆದರೆ ಮನೆಗೆ ಬಂದ ಪಾರ್ಸೆಲ್ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ ಉತ್ಪನ್ನದ ಮೇಲಿದ್ದ ಮೂಲ ಎಂ.ಆರ್.ಪಿ ಬೆಲೆಯನ್ನು ಅಳಿಸಿ, ಅದರ ಮೇಲೆ ಬಿಳಿ ಕಾಗದವನ್ನು ಅಂಟಿಸಿ ಬೆಲೆ ಯನ್ನು ಮೂಲ ಬೆಲೆಯನ್ನು ಕಾಣಿಸ ದಂತೆ ಮಾಡಲಾಗಿತ್ತು.
ಫ್ಲಿಪ್ಕಾರ್ಟ್ ಫೈನ್ಡ್ ಈ ಉತ್ಪನ್ನದ ನಿಜವಾದ ಮಾರುಕಟ್ಟೆ ಬೆಲೆ ಕೇವಲ 324 ರೂಪಾಯಿ ಗಳಾಗಿದ್ದರೂ, ಫ್ಲಿಪ್ ಕಾರ್ಟ್ ಮತ್ತು ಉತ್ತರ ಪ್ರದೇಶದ ಶ್ರೀ ಲಕ್ಷ್ಮೀ ಪೈಂಟ್ಸ್ ಹೌಸ್ ಗ್ರಾಹಕರಿಂದ 216 ರೂ ಗಳನ್ನು ಹೆಚ್ಚುವರಿ ಯಾಗಿ ವಸೂಲಿ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಬಗ್ಗೆ ಹೆಚ್ಚಿನ ಹಣ ಮರುಪಾವತಿಸುವಂತೆ ಶಿವಕುಮಾರ್ ಅವರು ಲೀಗಲ್ ನೋಟೀಸ್ ನೀಡಿದರೂ ಸಹ ಕಂಪನಿಯು ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸುವ ಮೂಲಕ ಸೇವಾ ನ್ಯೂನ್ಯತೆ ಎಸಗಿತ್ತು. ಇದರಿಂದ ನೊಂದ ಗ್ರಾಹಕರು ನ್ಯಾಯಕ್ಕಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.
ದೂರುದಾರರು ಸಲ್ಲಿಸಿದ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಆಯೋಗವು ಗ್ರಾಹಕರಿಗೆ ಮೋಸ ಮಾಡಿರುವುದು ಸತ್ಯ ಎಂದು ತೀರ್ಮಾನಿಸಿತು.
ದೂರುದಾರರ ವಾದವನ್ನು ಪುರಸ್ಕರಿ ಸಿದ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ಪೀಠವು ಫ್ಲಿಪ್ ಕಾರ್ಟ್‌ಗೆ ಗ್ರಾಹಕರಿಂದ ಪಡೆದ ಹೆಚ್ಚುವರಿ 216 ರೂಪಾಯಿ ಗಳಿಗೆ ಶೇ. 9ರಷ್ಟು ವಾರ್ಷಿಕ ಬಡ್ಡಿ ಸೇರಿಸಿ ಮರಳಿಸುವಂತೆ ಸೂಚಿಸ ಲಾಗಿದೆ.ಅಲ್ಲದೆ ಗ್ರಾಹಕರಿಗೆ ಉಂಟು ಮಾಡಿದ ಮಾನಸಿಕ ಕಿರಿಕಿರಿ ಮತ್ತು ದೂರಿನ ಕಾನೂನು ಖರ್ಚು ವೆಚ್ಚಕ್ಕಾಗಿ ಒಟ್ಟು 25,000 ರೂಪಾಯಿಗಳ ದಂಡವನ್ನು 45 ದಿನಗಳೊಳಗೆ ಪಾವತಿಸಲು ಆದೇಶಿಸಿದೆ. ಒಂದು ವೇಳೆ ಈ ಅವಧಿಯಲ್ಲಿ ಹಣ ಪಾವತಿಸಲು ವಿಫಲವಾದರೆ ಬಡ್ಡಿ ದರವನ್ನು ಶೇ.12ಕ್ಕೆ ಹೆಚ್ಚಿಸಿ ಪಾವತಿಸಬೇಕೆಂದು ತಿಳಿಸಿದೆ.
Tags
ಶಿವಮೊಗ್ಗ ವರದಿ