ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲೂಕಿನ ಅಗರದ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಯೊಬ್ಬರು ತಹಶೀಲ್ದಾರ್ ರವರು ಮಾನಸಿಕ ಕಿರುಕುಳ ಹಾಗೂ ಒತ್ತಡ ನೀಡುತ್ತಿದ್ದಾರೆ ಎಂದು ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದಿರುವುದು ಕಂದಾಯ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.
ಘಟನೆಯ ಹಿನ್ನೆಲೆ:
ಅಗರದಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಅಭಿಷೇಕ್ ಎಂಬುವವರು ಈ ಆತಂಕಕಾರಿ ಪತ್ರವನ್ನು ಬರೆದಿದ್ದಾರೆ. ತಹಶೀಲ್ದಾರ್ ಪರಸಪ್ಪ ಕುರಬರ್ ಅವರು ತಮ್ಮ ಮೇಲೆ ಅತಿಯಾದ ಒತ್ತಡ ಹೇರುತ್ತಿದ್ದಾರೆ ಎಂದು ಪತ್ರದಲ್ಲಿ ನೇರವಾಗಿ ಆರೋಪಿಸಲಾಗಿದೆ.
ಅಗರದಹಳ್ಳಿಯ ಸರ್ವೆ ನಂಬರ್ 56, 49 ಹಾಗೂ 50ರ ಪೌತಿ ಖಾತೆ ಮಾಡಿಸುವ ಜವಾಬ್ದಾರಿಯನ್ನು ತಹಶೀಲ್ದಾರ್ ಅವರು ವಹಿಸಿ ಕೊಂಡಿದ್ದು, ಆ ಕೆಲಸಕ್ಕಾಗಿ ತಮ್ಮ ಮೇಲೆ ನಿರಂತರ ಮಾನಸಿಕ ಒತ್ತಡ ಹೇರುತ್ತಿದ್ದಾರೆ ಎಂದು ವಿಎ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ 21 ವರ್ಷಗಳಿಂದ ಗ್ರಾಮ ಲೆಕ್ಕಾಧಿಕಾರಿಯಾಗಿ ಯಾವುದೇ ಲೋಪವಿಲ್ಲದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ಕುಟುಂಬಕ್ಕೆ ನಾನೊಬ್ಬನೇ ದುಡಿಯುವ ವ್ಯಕ್ತಿಯಾಗಿದ್ದು, ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಈ ಬಗ್ಗೆ ತಹಶೀಲ್ದಾರ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರೂ, ಅವರು ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ಈ ಮಾನಸಿಕ ಕಿರುಕುಳ ತಾಳಲಾರದೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿ ದ್ದೇನೆ" ಎಂದು ಪತ್ರದಲ್ಲಿ ಬರೆಯಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್:
ವಿಎ ಅಭಿಷೇಕ್ ಬರೆದಿರುವ ಈ ಪತ್ರವನ್ನು ಭದ್ರಾವತಿಯ ಅಜಿತ್ ಗೌಡ ಎಂಬುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿ ಕೊಂಡಿದ್ದು, ಅದು ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಈಗಾಗಲೇ ಮರಳು ಮತ್ತು ಇಸ್ಪೀಟು ದಂಧೆಯ ಕುರಿತಾದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಘಟನೆ ಈಗ ಜಿಲ್ಲಾಡಳಿತದ ಗಮನ ಸೆಳೆದಿದೆ.
ಪತ್ರ ವೈರಲ್ ಆಗಿ ಗದ್ದಲ ಸೃಷ್ಟಿಸಿದ ಬೆನ್ನಲ್ಲೇ, ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ನಡುವೆ ರಾಜಿಯಾಗಿದೆ ಎಂಬ ಮಾಹಿತಿ ದೊರಕಿದೆ.
ಆದರೆ, ಸರ್ಕಾರಿ ಅಧಿಕಾರಿಯೊಬ್ಬರು ಬಹಿರಂಗವಾಗಿ ಆತ್ಮಹತ್ಯೆ ಪತ್ರ ಬರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.