ವಿಜಯ ಸಂಘರ್ಷ ನ್ಯೂಸ್
ಶಿವಮೊಗ್ಗ: ರಾಜ್ಯದಲ್ಲಿ ಇತ್ತೀಚೆಗೆ ಜೈಲಿನಿಂದ ಪರಾರಿಯಾಗುತ್ತಿರುವ ಕೈದಿಗಳ ಸಂಖ್ಯೆ ಹೆಚ್ಚುತ್ತಿದೆ. ಕಲಬುರಗಿ ಜೈಲಿನಿಂದ ಖೈದಿಗಳು ಎಸ್ಕೇಪ್ ಕೇಸ್ ಮಾಸುವ ಮುನ್ನವೇ ಶಿವಮೊಗ್ಗ ದಲ್ಲೊಂದು ಪ್ರಕರಣ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿಯ ನಿರ್ಲಕ್ಷ್ಯದಿಂದ ನ್ಯಾಯಾಂಗ ಬಂಧನಕ್ಕೆ ಹೋಗಬೇಕಿದ್ದ ಆರೋಪಿ ಪರಾರಿಯಾಗಿದ್ದಾರೆ.
ಹೊಸನಗರ ತಾಲೂಕಿನ ಅಡುಗೋಡಿ ಗ್ರಾಮದ ವೆಂಕಟೇಶ್ (36) ಅರಣ್ಯ ಇಲಾಖೆ ವಶದಿಂದ ಎಸ್ಕೇಪ್ ಆದ ಆರೋಪಿ. ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವಶ ದಲ್ಲಿದ್ದ ವೆಂಕಟೇಶ್, ಜೈಲಿಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ತಪ್ಪಿಸಿಕೊಂಡಿದ್ದಾನೆ.
ವೆಂಕಟೇಶ್ ವಿರುದ್ದ 2019-20 ರಲ್ಲಿ ಕರ್ತವ್ಯಕ್ಕೆ ಅಡ್ಡಿ- ಹಲ್ಲೆ ಪ್ರಕರಣ ದಾಖಲಾಗಿತ್ತು.
ವಾರಂಟ್ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವೆಂಕಟೇಶ್ ನನ್ನು ವಶಕ್ಕೆ ಪಡೆದು, ಕೋರ್ಟ್ ಗೆ ಹಾಜರುಪಡಿಸಿದ್ದರು. ಆರೋಪಿಯನ್ನು ಹೊಸನಗರ ಜೆಎಂಎಫ್ ಸಿ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದರು. ಆರೋಪಿಯನ್ನು ಶಿವಮೊಗ್ಗ ಸೆಂಟ್ರಲ್ ಜೈಲಿಗೆ ಕರೆದೊಯ್ಯುವ ವೇಳೆ ಎಸ್ಕೇಪ್ ಆಗಿದ್ದಾನೆ.
ಹೊಸನಗರದ ಬಟ್ಟೆಮಲ್ಲಪ್ಪ ಸರ್ಕಲ್ ಬಳಿ ಬರುತ್ತಿದ್ದಂತೆ ವೆಂಕಟೇಶ್ ತನಗೆ ಹಸಿವಾಗ್ತಿದೆ ಊಟ ಬೇಕು ಎಂದಿದ್ದಾನೆ. ಡಿಆರ್ಎಫ್ಒಗಳಾದ ಸುನೀಲ್ ಡಿ ಕುಂಬಾರ್ ಹಾಗೂ ಇಬ್ರಾಹಿಂ ಜೀಪ್ ನಿಲ್ಲಿಸಿ, ಊಟ ತರಲು ಹೋಗಿದ್ದರು. ಈ ವೇಳೆ ಆರೋಪಿ ವೆಂಕಟೇಶ್ ಜೀಪ್ ನಲ್ಲಿದ್ದ ಸಿಬ್ಬಂದಿಗೆ ಹಲ್ಲೆ ಮಾಡಿ, ಎಸ್ಕೇಪ್ ಆಗಿದ್ದಾರೆ. ಅರಣ್ಯ ವೀಕ್ಷಕ ಅಯಾನ್ ಬೆಡೆಭಾಯಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಚಕ್ರಪಾಣಿಗೆ ಹಲ್ಲೆ ಮಾಡಿದ್ದಾನೆ.
ಬಟ್ಟೆಮಲ್ಲಪ್ಪ ಸುತ್ತಮುತ್ತ ಅರಣ್ಯ ಇಲಾಖೆ ಸಿಬ್ಬಂದಿಗಳು ಆರೋಪಿಗೆ ತೀವ್ರ ಶೋಧ ನಡೆಸಿದ್ದಾರೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.