ವಿಜಯ ಸಂಘರ್ಷ ನ್ಯೂಸ್
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ರಾವೇ ಗ್ರಾಮದ ದೊಡ್ಡನಗದ್ದೆ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಭೀಕರ ಭೂಕುಸಿತ ಸಂಭವಿಸಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಉಂಟಾಗಿದೆ.
ಗ್ರಾಮದ ವೀರಪ್ಪಗೌಡ ಅವರ ಮನೆಯ ಪಕ್ಕದಲ್ಲಿದ್ದ ಗುಡ್ಡ ಕುಸಿದ ಪರಿಣಾಮ ರಸ್ತೆ, ದನದ ಕೊಟ್ಟಿಗೆ ಹಾಗೂ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಭೂಕುಸಿತದಿಂದ ರಸ್ತೆ ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಲ್ಪಟ್ಟಿದ್ದು, ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿದೆ.
ಗ್ರಾಮಸ್ಥರ ಪ್ರಕಾರ, ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಪ್ರತಿವರ್ಷವೂ ಗುಡ್ಡ ಕುಸಿತ ಗಳು ಸಂಭವಿಸುತ್ತಿವೆ. ಈ ಕುರಿತು ಅನೇಕ ಬಾರಿ ಸ್ಥಳೀಯ ಶಾಸಕರು ಹಾಗೂ ಸರ್ಕಾರದ ಗಮನಕ್ಕೆ ಮನವಿ ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದಿ ರುವುದರಿಂದ ಜನರು ಜೀವಭಯ ದಲ್ಲೇ ಜೀವನ ಸಾಗಿಸುವಂತಾಗಿದೆ.
ತಕ್ಷಣವೇ ಭೂಕುಸಿತ ಪ್ರದೇಶಕ್ಕೆ ಉನ್ನತ ಅಧಿಕಾರಿಗಳ ತಂಡವನ್ನು ಕಳುಹಿಸಿ ಸ್ಥಳ ಪರಿಶೀಲನೆ ನಡೆಸುವಂತೆ, ಹಾನಿಗೊಳಗಾದ ಕುಟುಂಬಕ್ಕೆ ತುರ್ತು ಪರಿಹಾರ ಮತ್ತು ಸೂಕ್ತ ಪರಿಹಾರಧನ ನೀಡುವಂತೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಶಾಶ್ವತ ತಡೆಗೋಡೆ, ನೀರು ಹರಿವಿನ ವ್ಯವಸ್ಥೆ ಮತ್ತು ಇತರ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳುವಂತೆ ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇನ್ನಷ್ಟು ಅನಾಹುತಗಳು ಸಂಭವಿಸುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Tags
ತೀರ್ಥಹಳ್ಳಿ ವರದಿ