ರಾಜ್ಯದ 30 ನೇ ಮುಖ್ಯ ಮಂತ್ರಿಯಾಗಿ ಬಸವರಾಜ ಬೊಮ್ಮಾಯಿ-ನಾಳೆಯೇ ಪ್ರಮಾಣ ವಚನ

 


ವಿಜಯ ಸಂಘರ್ಷ

ಬೆಂಗಳೂರು: ನಿರ್ಗಮಿತ ಸಿಎಂ ಬಿ.ಎಸ್.ಯಡಿಯೂರಪ್ಪ ಉತ್ತರಾಧಿಕಾರಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ..! ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸುವ ಮೂಲಕ ಬಿಜೆಪಿ ಹೈಕಮಾಂಡ್‌ ರಾಜಕೀಯವಾಗಿ ತೆರೆ ಎಳೆದಿದೆ.

ಪಕ್ಷವನ್ನು ಬೇರು ಮಟ್ಟದಿಂದ ಬೆಳೆಸಿ ಅಧಿಕಾರಕ್ಕೆ ಬಂದಿದ್ದ ಯಡಿಯೂರಪ್ಪ ಅವರ ಅಧಿಕಾರಾವಧಿಯನ್ನು 2 ವರ್ಷಗಳಿಗೇ ಮೊಟಕುಗೊಳಿಸುವ ಮೂಲಕ ಬಿಜೆಪಿ ಹೈಕಮಾಂಡ್ ರಾಜ್ಯದ ಪ್ರಬಲ ವೀರಶೈವ ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಲಿದೆ ಎಂಬ ಕೂಗಿಗೆ ಬೊಮ್ಮಾಯಿ ಅಸ್ತ್ರ ಪ್ರಯೋಗ ಮಾಡಲಾಗಿದೆ.



ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸುವ ಮೂಲಕ ವೀರಶೈವ-ಲಿಂಗಾಯತರ ವಿಶ್ವಾಸವನ್ನು ಬಿಜೆಪಿ ಉಳಿಸಿಕೊಂಡಿದೆ. ಕಾರಣ  ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಾರೆ ಎಂಬ ಹರಿದಾಡಿದ್ದೆ ತಡ, ರಾಜ್ಯಾದ್ಯಂತ ವೀರಶೈವ-ಲಿಂಗಾಯತ ಮಠಮಾನ್ಯಗಳು ಯಡಿಯೂರಪ್ಪ ಬೆನ್ನಿಗೆ ನಿಂತಿದ್ದವು. ಒಂದು ಹಂತದಲ್ಲಿ ಯಡಿಯೂರಪ್ಪ ಬದಲಾವಣೆ ಅನಿವಾರ್ಯ ಎಂಬ ಸಂದೇಶ ರವಾನೆಯಾದಾಗ ವಿವಿಧ ಮಠಾಧೀಶರು, ಸ್ವಾಮೀಜಿಗಳು ಕೂಡಾ ಒಂದು ಆಯ್ಕೆಯನ್ನು ಎದುರಿಗೆ ಇಟ್ಟಿದ್ದರು.

ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ್ ಅಥವಾ ಬಸನಗೌಡ ಪಾಟೀಲ್ ಯತ್ನಾಳ್ ಯಾರಾದ್ರೂ ಓಕೆ. ಒಟ್ಟಿನಲ್ಲಿ ವೀರಶೈವ-ಲಿಂಗಾಯತರು ಕಳೆದು ಕೊಂಡ ಸಿಎಂ ಪಟ್ಟ ಅದೇ ಸಮುದಾಯಕ್ಕೆ ಸಿಗಬೇಕು ಅನ್ನೋದು ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ ಆದಿಯಾಗಿ ಎಲ್ಲರ ವಾದವಾಗಿತ್ತು. ಇದೀಗ ವೀರಶೈವ ಲಿಂಗಾಯತ ಸಮುದಾಯದವರೆ ಸಿಎಂ ಆಗಿದ್ದಾರೆ. ಮಾಜಿ ಸಿಎಂ ದಿವಂಗತ ಎಸ್‌. ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಸಿಎಂ ಆಗುವ ಮೂಲಕ ತಂದೆ-ಮಗ ಸಿಎಂ ಆದ ಮತ್ತೊಂದು ಉದಾಹರಣೆ ರಾಜ್ಯಕ್ಕೆ ಸಿಕ್ಕಿದೆ.

ನೂತನ ಮುಖ್ಯಮಂತ್ರಿಯಾಗಲಿರುವ ಬಸವರಾಜ ಬೊಮ್ಮಾಯಿ  ಯಡಿಯೂರಪ್ಪಗೆ ಮಾತ್ರವಲ್ಲ, ಅವರ ಕುಟುಂಬ ವರ್ಗಕ್ಕೂ ಆಪ್ತರು. ಬಿ. ವೈ. ವಿಜಯೇಂದ್ರ, ಬಿ.ವೈ.ರಾಘವೇಂದ್ರ ಸೇರಿದಂತೆ ಹಲವರ ಜೊತೆ ಒಡನಾಟವನ್ನು ಬೊಮ್ಮಾಯಿ ಹೊಂದಿದ್ದಾರೆ. ಯಡಿಯೂರಪ್ಪ ಆಪ್ತರ ಪೈಕಿ ಸದಾ ಮುಂಚೂಣಿಯಲ್ಲಿದ್ದ ಬೊಮ್ಮಾಯಿ, ಹಲವು ಬಾರಿ ಯಡಿಯೂರಪ್ಪ ಪರ ವಹಿಸಿ ಬ್ಯಾಟಿಂಗ್ ಮಾಡಿದ್ದರು.

ಯಡಿಯೂರಪ್ಪ ಆಪ್ತರಾದ ಕಾರಣಕ್ಕಾಗಿಯೇ ಪ್ರಬಲ ಗೃಹ ಖಾತೆಯೂ ಬೊಮ್ಮಾಯಿ ಅವರಿಗೆ ಒಲಿದಿತ್ತು. ದಿಲ್ಲಿಗೆ ತೆರಳಿ ವರಿಷ್ಠರನ್ನ ಭೇಟಿ ಮಾಡುವ ಸಂದರ್ಭದಲ್ಲೂ ವಿಜಯೇಂದ್ರ ಜೊತೆ ಬೊಮ್ಮಾಯಿ ಅವರಿದ್ದರು. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಿಷ್ಠಾಚಾರದ ಪ್ರಕಾರ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆಯಾದರೂ, ಇದು ಹೈಕಮಾಂಡ್ ಹಾಗೂ ಯಡಿಯೂರಪ್ಪ ನಡುವಣ ಒಪ್ಪಂದದಂತೆ ಕಂಡುಬರೋದು ಸುಳ್ಳಲ್ಲ..!

ಒಂದೆಡೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು, ಮತ್ತೊಂದೆಡೆ ಉತ್ತರ ಕರ್ನಾಟಕ ಭಾಗಕ್ಕೆ ರಾಜಕೀಯವಾಗಿ, ಆರ್ಥಿಕವಾಗಿ, ಅಭಿವೃದ್ಧಿಯಲ್ಲಿ ಹಿನ್ನಡೆ ಆಗುತ್ತಿದೆ ಎಂಬ ವಾದಕ್ಕೆ ನೂತನ ಸಿಎಂ ಉತ್ತರವಾಗಬಲ್ಲರು. ಹಾವೇರಿ ಜಿಲ್ಲೆ ಶಿಗ್ಗಾಂವ್ ಶಾಸಕರಾಗಿರುವ ಬಸವರಾಜ ಬೊಮ್ಮಾಯಿ ಅವರನ್ನು ನಾಡಿನ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ, ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಕೂಗು ಹಾಗೂ ಮಲತಾಯಿ ಧೋರಣೆಯ ವಾದಕ್ಕೆ ತಕ್ಕ ಪ್ರತ್ಯುತ್ತರವನ್ನು ಬಿಜೆಪಿ ಕೊಟ್ಟಿದೆ.
ಒಂದು ಹಂತದಲ್ಲಿ ಬಿಜೆಪಿ ಹೈಕಮಾಂಡ್ ಸದಾ ಅಚ್ಚರಿಯ ಆಯ್ಕೆ ಮೂಲಕ ಗಮನ ಸೆಳೆಯುತ್ತದೆಯಾದರೂ, ಈ ಬಾರಿ ಯಡಿಯೂರಪ್ಪ ವಾದಕ್ಕೆ ಬೆಲೆ ಕೊಟ್ಟಿದೆ ಎಂದೇ ವಿಶ್ಲೇಷಿಸಬಹುದು. ಇದು ಮುಂದಿನ ಚುನಾವಣೆ ದೃಷ್ಟಿಯಿಂದ ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿರುವ ಎಚ್ಚರಿಕೆಯ ಹೆಜ್ಜೆ ಅಲ್ಲದೆ ಮತ್ತೇನೂ ಅಲ್ಲ..!

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು